ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಅವರ ಸ್ನೇಹಿತರು ಮನೆಯ ಸಮೀಪದಲ್ಲಿ ಮಾತನಾಡುತ್ತಿದ್ದ ವೇಳೆ ಮಾರಕಾಯುಧಗಳಿಂದ ಬಂದ ದುಷ್ಕರ್ಮಿಗಳ ತಂಡವೊಂದು ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸರು 13 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಯ ಸಂಬಂಧ 20 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಲೂರು ಹೊಯ್ಯಾಣ ನಿವಾಸಿ ಸಚಿನ್ (24), ಆಲೂರು ರಾಮೇಶ್ವರ ನಗರ ನಿವಾಸಿ ಶರತ್ ದೇವಾಡಿಗ (24), ಕೆಂಬೈಲು ನಿವಾಸಿಗಳಾದ ಕಾರ್ತಿಕ್ (22) ಕೀರ್ತಿಕ್ (20), ಪಡುಕೋಣೆ ನಿವಾಸಿ ಪ್ರಕಾಶ್ (20), ಪಡುಕೋಣೆಯ ಹನುಮಂತ ನಗರ ನಿವಾಸಿ ಜಗದೀಶ್ (31), ಪಡುಕೋಣೆ ರಾಮಮಂದಿರ ನಿವಾಸಿ ಗೌತಮ್ (23), ಪಡುಕೋಣೆ ನಿವಾಸಿ ಮಹೇಂದ್ರ ಪೂಜಾರಿ, ಹಡವು ನಿವಾಸಿ ಸಂತೋಷ್ ಮೊಗವೀರ, ರೋಶನ್ ಫರ್ನಾಂಡಿಸ್, ಆಲೂರು ನಿವಾಸಿ ಪ್ರಸಾದ್ ಆಚಾರ್ (30) ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳಲ್ಲಿ ಇಬ್ಬರು ಕಾನೂನಿನ ಜತೆ ಸಂಘರ್ಷಕ್ಕೊಳಗಾದ ಬಾಲಕರು ಸೇರಿದ್ದಾರೆ. ಬಂಧಿತ ಆರೋಪಿಗಳಿಂದ 1 ಏರ್ ಪಿಸ್ತೂಲ್, 4 ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.
5 ದಿನಗಳ ಹಿಂದೆ ಪಡುಕೋಣೆ ನಿವಾಸಿ ಶ್ರೀಕಾಂತ ಪೂಜಾರಿ ಎಂಬುವರು ಹಡವು ಗ್ರಾಮದ ಶ್ರೀ ಮಹಾವಿಷ್ಣು ದೇವಳಕ್ಕೆ ಹೋಗುವ ಕ್ರಾಸ್ ಬಳಿ ಸಂಜೆ ಸ್ನೇಹಿತರಾದ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಚಂದ್ರ ಪಡುಮನೆ, ಸುರೇಶ, ಶಿವಕುಮಾರ್ ಹೆಬ್ಬಾರ್ ಮತ್ತವರ ಮಗ ಮನು ಹೆಬ್ಬಾರ್, ಸುದೇಶ್ ಶೆಟ್ಟಿ ಜತೆಯಲ್ಲಿ ಮಾತನಾಡುತ್ತಾ ನಿಂತಿದ್ದ ವೇಳೆ ಆರೋಪಿಗಳು ಏಕಾಏಕಿ ಮಾರಕಾಯುಧ ಗಳಿಂದ ಬಂದು ಹಲ್ಲೆಗೆ ಯತ್ನಿಸಿದ್ದರು ಎಂದು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ, ಅಪರಾಧ ವಿಭಾಗದ ಪಿಎಸ್‌ಐ ಬಸವರಾಜ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.