ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ನ.29: ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಅರಾಟೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆಯ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಳೆ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದೆ. 615 ಮೀಟರ್ ಉದ್ದವಿರುವ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸುವಂತೆ ತಜ್ಞರ ಸಮಿತಿ ಶಿಪಾರಸ್ಸು ಮಾಡಿತ್ತು.
ಜಿಲ್ಲೆಯ ಕುಂದಾಪುರ ತಾಲೂಕಿನ ಸೌಪರ್ಣಿಕಾ ನದಿಗೆ ಅಡ್ಡಲಾಗಿ ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ-66ರ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ 1966 ಇಸವಿಯಲ್ಲಿ ನಿರ್ಮಿಸಿರುವ ಹಳೆಯ ಸೇತುವೆಯು ಶಿಥಿಲಗೊಂಡಿರುವ ಹಿನ್ನೆಲೆ, ಸಾರ್ವಜನಿಕ ಹಿತ ದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989ರ ಕಲಂ 221(ಎ(2) & (5) ಅನ್ವಯ, ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ-66ರ ಮುಳ್ಳಿಕಟ್ಟೆ ಸಮೀಪದ ಅರಾಟೆ ಹಳೆ ಸೇತುವೆಯಲ್ಲಿ (ಏm 272-840) ವಾಹನ ಸಂಚಾರವನ್ನು ನಿಷೇಧಿಸಿ ಈ ಸೇತುವೆಯಲ್ಲಿ ಸಂಚರಿಸುವ ವಾಹನಗಳಿಗೆ ಪಕ್ಕದಲ್ಲೇ ಚತುಷ್ಪಥ ಹೆದ್ದಾರಿಯಲ್ಲಿ ನಿರ್ಮಾಣಗೊಂಡ ಹೊಸ ಸೇತುವೆಯಲ್ಲಿ ಬದಲೀ ಸಂಚಾರ ವ್ಯವಸ್ಥೆಯನ್ನು ಮಾಡಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಆದೇಶಿಸಿರುತ್ತಾರೆ.

ಚೆನ್ನೈ ಎಂ/ಎಸ್ ಅಸ್ಸಿಸ್ಟೆಮ್ ಇಂಡಿಯಾ ಲಿಮಿಟೆಡ್ ವತಿಯಿಂದ ನೇಮಿಸಲಾದ ತಜ್ಞರ ತಪಾಸಣಾ ವರದಿಯಲ್ಲಿ, ಸುಮಾರು 58 ವರ್ಷಗಳ ಹಳೆಯದಾದ ಈ ಸೇತುವೆಯು ಶಿಥಿಲಗೊಂಡಿದ್ದು, ವಾಹನ ಸಂಚಾರಕ್ಕೆ ಯೋಗ್ಯವಲ್ಲದೇ ಇರುವುದರಿಂದ ತಕ್ಷಣವೇ ವಾಹನ ಸಂಚಾರವನ್ನು ನಿಷೇಧಿಸುವ ಬಗ್ಗೆ ತಿಳಿಸಲಾಗಿದೆ. ಆದುದರಿಂದ ಅರಾಟೆ ಹಳೆ ಸೇತುವೆ ಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಅಲ್ಲೇ ಸಮೀಪದ ಹೊಸ ಸೇತುವೆಯಲ್ಲಿ ಸಂಚರಿಸಲು ಆದೇಶಿಸಲಾಗಿದೆ.
ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಕನ್ನಡಕುದ್ರು (ಮೂವತ್ತು ಮುಡಿ) ಕ್ರಾಸ್ ಬಳಿಯಿಂದ ಅರಾಟೆಯವರೆಗೆ ಹಳೆಯ ಸೇತುವೆ ಇರುವ ಭಾಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪಕ್ಕದಲ್ಲೇ ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಾಣಗೊಂಡ ಹೊಸ ಸೇತುವೆಯಲ್ಲಿಯೇ ಎರಡೂ ಕಡೆಗಳ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕುಂದಾಪುರದಿಂದ ಸಂಚರಿಸುವವರುವ ಕನ್ನಡಕುದ್ರು ಬಳಿಯಿಂದ ಅರಾಟೆಯವರೆಗೆ ಎಡ ಭಾಗದ ಹೊಸ ಹೆದ್ದಾರಿಯಲ್ಲಿಯೇ ಸಂಚರಿಸಬೇಕು. ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಹೊಸ ಸೇತುವೆಯಲ್ಲಿಯೇ ಎರಡೂ ಕಡೆಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನೂ ಸಾವಿರಾರು ವಾಹನ ಸಂಚಾರವಿರುವ ಈ ಮಾರ್ಗದಲ್ಲಿ ಸುಲಭ ಸಂಚಾರಕ್ಕೆ ಮಧ್ಯೆ ಅಳವಡಿಸಿದ ರಿಪ್ಲೆಕ್ಟರ್ ಕೋನ್ ಒಂದೇರಡು ದಿನದಲ್ಲಿಯೇ ಹಾನಿಗೀಡಾಗಿದೆ. ಓವರ್‌ಟೇಕ್ ಮಾಡುವವರು ಹಾಗೂ ರಾತ್ರಿ ಸಂಚಾರ ಮಾಡುವವರು ಎಚ್ಚರಿಕೆಯಿಂದ ಪ್ರಯಾಣಿಸಬೇಕಾಗಿದೆ.















