ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಸಿದ್ಧಿ ಸೌರಭ ವಾರ್ಷಿಕೋತ್ಸವ ಸಮಾರಂಭದ ಸಂದರ್ಭದಲ್ಲಿ ನೂತನ ಎಲ್. ಟಿ. ತಿಮ್ಮಪ್ಪ ಹೆಗಡೆ ಮೆಮೋರಿಯಲ್ ಹಾಲ್ ‘ಜ್ಞಾನನಿಕೇತನʼ ವನ್ನು ಲೋಕಾರ್ಪಣೆಗೊಳಿಸಲಾಯಿತು.
ತುರುವೆಕೆರೆ ಮಾದಿಹಳ್ಳಿಯ ರಾಮಕೃಷ್ಣ ಮಠದ ಶ್ರೀ ಧರ್ಮಾವೃತಾನಂದ ಸ್ವಾಮಿಗಳು ಈ ನೂತನ ಮೆಮೋರಿಯಲ್ ಹಾಲ್‌ನ್ನು ಉದ್ಘಾಟಿಸಿದರು.
ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಎಲ್ ಟಿ. ತಿಮ್ಮಪ್ಪ ಹೆಗಡೆ ಅವರ ಜೀವನ ಮತ್ತು ಸಾಮಾಜಿಕ ಕೊಡುಗೆಗಳ ಕುರಿತಾಗಿ ಮಾತನಾಡುತ್ತಾ, ಎಲ್ ಟಿ ತಿಮ್ಮಪ್ಪ ಹೆಗಡೆ ಅವರು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿಗಳಾಗಿದ್ದ ದಿ. ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರಿಗೆ ಆತ್ಮೀಯರಾಗಿದ್ದು, ಅವರೆಲ್ಲ ಕಾರ್ಯಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದರು. ಕುಗ್ರಾಮವಾಗಿದ್ದ ಈ ಪ್ರದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ವಿದ್ಯಾಸಂಸ್ಥೆಯ ಅಗತ್ಯತೆಯನ್ನು ಮನಗಂಡು ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ಜೊತೆಗಿದ್ದು ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಸ್ಥಾಪನೆಗೆ ಹೆಗಲೇಣಿಯಾದರು. ಅವರ ತ್ಯಾಗ ಮನೋಭಾವ, ಸಮಾಜಸೇವೆ, ಧಾರ್ಮಿಕ ಶ್ರದ್ಧೆ, ಪರಿಸರ ಕಾಳಜಿ, ಸಹಕಾರ ಮನೋಭಾವ ಆದರ್ಶಪ್ರಾಯವಾದುದು ಎಂದರು.
ಇಂತಹ ಮಹಾನ್ ಸಾಧಕರ ಬದುಕು ಮತ್ತು ಆದರ್ಶಗಳು ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು, ಮಕ್ಕಳ ಬದುಕಿಗೆ ಹೆಗಡೆಯವರ ಚಿಂತನೆಗಳು ಸ್ಪೂರ್ತಿಯಾಗಬೇಕು ಎಂಬ ಸದಾಶಯದೊಂದಿಗೆ ಈ ನೂತನ ಸಭಾಂಗಣಕ್ಕೆ ಅವರ ಹೆಸರನ್ನಿಟ್ಟಿದ್ದೇವೆ. ಇದು ಕೇವಲ ಒಂದು ಕಟ್ಟಡವಲ್ಲ, ಜ್ಞಾನ-ಚಿಂತನೆ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಪೀಠಕವಾಗಲಿದೆ. ಇದು ಎಲ್ಲರಿಗೂ ಜ್ಞಾನದ ಬೀಜಗಳನ್ನು ಬಿತ್ತರಿಸುವ ಸತ್ಯಧರ್ಮದ ಕೇಂದ್ರವಾಗಲಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾದ ಒಂದು ವಿಶೇಷ ಕಲಾಮಂಟಪವಾಗಲಿದೆ ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್. ಟಿ. ತಿಮ್ಮಪ್ಪ, ದಾವಣಗೆರೆಯ ಶೈಕ್ಷಣಿಕ ಸಲಹೆಗಾರರೂ ಹಾಗೂ ತರಬೇತುದಾರರಾದ ಜಗನ್ನಾಥ ನಾಡಿಗೇರ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದಮೂರ್ತಿ ಹೆಚ್. ಬಾಲಚಂದ್ರ ಭಟ್, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ. ಟ್ರಸ್ಟಿಗಳಾದ ಹೆಚ್. ಗಣೇಶ್ ಕಾಮತ್, ಎಸ್ ನಾರಾಯಣ್ ರಾವ್, ಡಾ. ಎನ್. ಪಿ. ನಾರಾಯಣ ಶೆಟ್ಟಿ, ಶಾಲಾ ಆಡಳಿತಾಧಿಕಾರಿಗಳಾದ ವೀಣಾ ರಶ್ಮೀ ಎಂ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.