ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ವಿಕಲಚೇತನರು ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆತ್ಮವಿಶ್ವಾಸದಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸುವುದು ಸಮಾಜ ಹಾಗೂ ಸರಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಅಂದು ನಗರದ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ (ಮಿನಿಹಾಲ್) ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನರ ಸಂಘಟನೆಗಳು ಮತ್ತು ಪಾಲಕರ ಸಂಘಟನೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನ ಮಕ್ಕಳ ಸಬಲೀಕರಣಕ್ಕಾಗಿ ಅನೇಕ ಶಾಲಾ- ಕಾಲೇಜು ಹಾಗೂ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಕಾಲದಲ್ಲಿ ವಿಕಲಚೇತನರಿಗೆ ವಿಧ್ಯಾಭ್ಯಾಸದ ಅವಕಾಶಗಳ ಜೊತೆಗೆ ಕೌಶಲ್ಯಾಭಿವೃದ್ಧಿಗಳ ಕಲಿಕೆಯು ಅವರ ಬದುಕಿನಲ್ಲಿ ಸಾಧನೆ ಮಾಡುವಂತಹ ಭರವಸೆಯನ್ನು ಮೂಡಿಸುತ್ತಿದೆ ಎಂದರು.
ವಿಕಲಚೇತನ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹ ನೀಡುವುದರಿಂದ ಅವರ ದೌರ್ಬಲ್ಯಗಳ ಹೊರತಾಗಿಯೂ ಅದಮ್ಯ ಶಕ್ತಿ ಅವರಲ್ಲಿದೆ ಎಂಬುದನ್ನು ನಿರೂಪಿಸಲು ಸಾಧ್ಯ ಎಂದ ಅವರು, ವಿಕಲಚೇತನರ ಸರ್ವತೋಮುಖ ಅಭಿವೃದ್ಧಿಗೆ ಸರಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವುಗಳ ಬಗ್ಗೆ ಮಾಹಿತಿಯನ್ನು ಸಮರ್ಪಕವಾಗಿ ತಲುಪಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್ ಯೋಗೇಶ್ ಮಾತನಾಡಿ, ವಿಕಲಚೇತನರ ಏಳಿಗೆಗೆ ಕುಟುಂಬದ ಸದಸ್ಯರು ಮಾತ್ರವಲ್ಲದೇ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ವಿಕಲಚೇತನರಿಗಾಗಿ ಕಾನೂನು ಅಡಿಯಲ್ಲಿ ಅನೇಕ ಹಕ್ಕುಗಳನ್ನು ನೀಡಿದ್ದು, ಅವರ ಶ್ರೇಯಸ್ಸು ಹಾಗೂ ಮಾನವ ಹಕ್ಕುಗಳಿಗೆ ಚ್ಯುತಿ ತರದಂತೆ ವಿಕಲಚೇತನರ ಅಭಿವೃದ್ಧಿಯಲ್ಲಿ ಸಹಕಾರ ನೀಡಬೇಕು ಎಂದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹಾಗೂ ಡಿಡಿಪಿಐ ಗಣಪತಿ ಮಾತನಾಡಿದರು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಅನುಕೂಲವಾಗುವಂತೆ ವೈದ್ಯಕೀಯ ವೆಚ್ಚ, ವಿದ್ಯಾರ್ಥಿವೇತನ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ವಿಶೇಷಚೇತನರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕವಿತಾ, ನಿಶಾಂತ, ಅನುರಾಗ್ ನಾಯಕ್, ಕಿಶೋರ್, ಶ್ರೇಯಸ್ ಭಟ್, ಸುರೇಶ್ ಬಿ ಪೂಜಾರಿ, ಟಿ.ಎಸ್ ಹುಸೇನ್, ಹೆಚ್ ಸಂಕೇತ್ ಕುಮಾರ್ ಶೆಟ್ಟಿ, ಶಶಿಕಲಾ, ಶ್ರೀಲತಾ ಹಾಗೂ ಕೃಷ್ಣದೇವಾಡಿಗ ಅವರುಗಳನ್ನು ಮತ್ತು ಜಗದೀಶ್ ಭಟ್, ದಯಾನಂದ ಕಾಪು, ಜಯಜತ್ತನ್, ನಿರಂಜನ ಭಟ್ ಹಾಗೂ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವಿಶೇಷ ಶಾಲಾ ಮಕ್ಕಳಿಗೆ ಹಾಗೂ ಎಲ್ಲಾ ತಾಲೂಕುಗಳ ವಿಕಲಚೇತನರಿಗಾಗಿ ಆಯೋಜಿಸಲಾದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಶಾಲಾ ಮಕ್ಕಳು ಸಿದ್ಧಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು. ವಿಶೇಷ ಶಾಲಾ ಮಕ್ಕಳು ಹಾಗೂ ವಿಕಲಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ನಗರಸಭಾ ಸದಸ್ಯ ವಿಜಯ್ ಕೊಡವೂರು, ರೆಡ್ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ವಿ.ಹಿ.ನಾ.ಸ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್, ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಆಗ್ನೇಸ್ ಕುಂದರ್, ಪಾಲಕರ ಹಾಗೂ ಪೋಷಕರ ಸಂಘದ ಅಧ್ಯಕ್ಷ ಜಯ ವಿಠ್ಠಲ್, ಡಿಡಿಆರ್ಸಿ ಸಿಬ್ಬಂದಿಗಳು, ವಿಶೇಷ ಶಾಲಾ ಮಕ್ಕಳು, ಶಿಕ್ಷಕ-ಶಿಕ್ಷಕಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಿಶೇಷ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ರವೀಂದ್ರ ಹೆಚ್ ಹಾಗೂ ವಿಕಲಚೇತನರ ಶಿಕ್ಷಕ ಹಾಗೂ ಶಿಕ್ಷಕಿಯರ ಸಂಘದ ರಾಜ್ಯ ಅಧ್ಯಕ್ಷೆ ಡಾ.ಕಾಂತಿ ನಿರೂಪಿಸಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ ವಂದಿಸಿದರು.