ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಐಸಿಎಂಆರ್-2024ರಲ್ಲಿ ಪರಿಸರ ನಾಯಕತ್ವಕ್ಕಾಗಿ ಎಂಐಟಿ ಮಾಹೆ ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪರಿಸರ ಶಿಕ್ಷಣ ಮತ್ತು ಸಾಮಾಜಿಕ ಸ್ವಯಂ ಸೇವಾ ಕ್ಷೇತ್ರದ ಅವರ ದಣಿವರಿಯದ ಸಮರ್ಪಣೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿತ್ತು.
ಭಾರತ ಸರ್ಕಾರದ ಎಸ್.ಇ.ಎ.ಸಿ/ಎಸ್.ಇ.ಐ.ಎ.ಎ ಸಮಿತಿಯ ಸದಸ್ಯರಾಗಿರುವ ಡಾ. ಬಾಲಕೃಷ್ಣ ಮದ್ದೋಡಿ ಅವರು ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆಯ ಪ್ರಬಲ ಪ್ರತಿಪಾದಕರಾಗಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಬಾಲಕೃಷ್ಣ ಮದ್ದೋಡಿ ಅವರು ಕೈಗೊಂಡ ಪರಿಸರ ಸಂರಕ್ಷಣೆ ಬಗೆಗಿನ ಕಾರ್ಯಗಳು, 100 ವರ್ಷಗಳಿಗಿಂತ ಹೆಚ್ಚು ಹಳೆಯದಾದ 5 ಮರಗಳನ್ನು ಮರು ನೆಡುವಿಕೆ, 2000ಕ್ಕಿಂತ ಹೆಚ್ಚಿನ ಸಸಿಗಳನ್ನು ನೆಡುವುದು, 60 ಮರಗಳನ್ನು ಕಡಿಯುವುದನ್ನು ತಡೆಗಟ್ಟುವಲ್ಲಿ ಅವರ ಕೊಡುಗೆಯನ್ನು ಸಮೀಕ್ಷೆ ತೀರ್ಪುಗಾರರು ಪರಿಗಣಿಸಿ ಆಯ್ಕೆಮಾಡಲಾಗಿದೆ. ಹಸಿರು ಅಭಿವೃದ್ಧಿ, ಗ್ರೀನಥಾನ್ ಕಾರ್ಯಕ್ರಮದ ಮೂಲಕ ಕರ್ನಾಟಕದ ಸುಮಾರು 20,000 ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಕ್ರಮ ಅವರು ಸಂಘಟಿಸಿದ್ದಾರೆ. ವಿಶ್ವ ಜಲ ದಿನ, ವಿಶ್ವ ಪರಿಸರ ದಿನ, ವಿಶ್ವ ಭೂ ದಿನ, ವಿಶ್ವ ಓಝೋನ್ ದಿನವನ್ನು ಆಯೋಜಿಸಿ ಯುವಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇವರ ಈ ಕೆಲಸ ಜಾಗತಿಕ ಪರಿಸರದ ಮೇಲೆ ಉತ್ತಮ ಪ್ರಭಾವ ಬೀರಿದೆ. ಪರಿಸರ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ನೀರು ಮತ್ತು ನೈರ್ಮಲ್ಯವನ್ನು ಉಳಿಸಲು ಅವರು ಶ್ರಮಿಸಿದ್ದಾರೆ.