ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತ್ರಾಸಿ ಕಡಲ ಕಿನಾರೆಯಲ್ಲಿರುವ ಪ್ರವಾಸಿಗನನ್ನು ಕರೆದೊಯ್ದಿದ್ದ ಜೆಟ್‌ಸ್ಕೀ ಬೋಟ್ ಮಗುಚಿದ ಪರಿಣಾಮ ಇಬ್ಬರು ಸಮುದ್ರಕ್ಕೆ ಬಿದ್ದು, ಜೆಟ್ಸ್ಕೀ ರೈಡರ್ ರೋಹಿದಾಸ್ (45) ನಾಪತ್ತೆಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಪ್ರವಾಸಿಗನನ್ನು ರಕ್ಷಿಸಲಾಗಿದೆ.
ತ್ರಾಸಿ ಬೀಚ್ನಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್‌ನ ಜೆಟ್‌ಸ್ಕೀ ಬೋಟ್‌ನಲ್ಲಿ ಓರ್ವ ಪ್ರವಾಸಿಗರನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸಲಾಗುತ್ತಿತ್ತು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್‌ಸ್ಕೀ ಮಗುಚಿ ಬಿದ್ದಿತ್ತು. ರೈಡ್‌ಗೂ ಮೊದಲು ಪ್ರವಾಸಿಗರಿಗೆ ಲೈಫ್ ಜಾಕೆಟ್ ಹಾಕಿ ಸುರಕ್ಷತಾ ಕ್ರಮ ವಹಿಸಿದ್ದರಿಂದ ಆತನನ್ನು ರಕ್ಷಿಸಿ ಕರೆತರಲಾಗಿದೆ. ರೈಡ್ ಮಾಡುತ್ತಿದ್ದ ರೋಹಿದಾಸ್ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ.
ಮುರ್ಡೇಶ್ವರ ನಿವಾಸಿಯಾದ ರೋಹಿದಾಸ್ ಕುಟುಂಬದೊಂದಿಗೆ ತ್ರಾಸಿಯಲ್ಲಿಯೇ ವಾಸಿಸುತ್ತಿದ್ದು, ಜೆಟ್ಸ್ಕೀ ಮತ್ತಿತರ ಬೋಟ್ ರೈಡ್ ಕಾಯಕ ಮಾಡಿಕೊಂಡಿದ್ದರು. ಗಂಗೊಳ್ಳಿ ಪೊಲೀಸರು ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.