ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಬೀಚ್ ಸಮೀಪ ಕಾರಿನಲ್ಲಿ ಎಂಡಿಎಂಎ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಉಡುಪಿ ಸೆನ್ ಅಪರಾಧ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಅಬ್ರಾರ್ ಶೇಖ್, ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್, ಮೊಹಮ್ಮದ್ ಜಿಯಾಮ್ ಬೆಳ್ಳಿ, ನೌಮನ್ ಸಜ್ಜಾದ್ ಮುಸ್ತಕೀಮ್ ಕೆವಾಕ ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಸೆನ್ ಅಪರಾಧ ದಳದ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಿ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 15 ಗ್ರಾಂ 59 ಮಿಲಿ ಗ್ರಾಂ ತೂಕದ ಅಂದಾಜು ಮೌಲ್ಯ ರೂ. 78,000ದ ಎಂಡಿಎಂಎ ಪೌಡರ್, ವಶಕ್ಕೆ ಪಡೆದಿದ್ದಾರೆ. ಆಪಾದಿತರು ಬಳಸಿದ್ದ ಮೊಬೈಲ್ ಪೋನ್-5, ಅಂದಾಜು ಮೌಲ್ಯ ರೂ. 50,000/-, ಪಾರದರ್ಶಕ ಪ್ಲಾಸ್ಟಿಕ್ ಕವರ್-5, ಮಾದಕ ವಸ್ತು ಮಾರಾಟ ಮಾಡಲು ಬಳಸಿದ ಕಾರನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಂಡಿರುವುದಾಗಿದೆ. ವಶಪಡಿಸಿಕೊಂಡಿರುವ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 11,28,000/- ಆಗಿದೆ.
ಆಪಾದಿತ ಅಬ್ರಾರ್ ಶೇಖ್ ಎಂಡಿಎಂಎ ಪೌಡರನ್ನು ಬೆಂಗಳೂರಿನ ದಾವೂದ್ ಮತ್ತು ಇಸಾಕ್ ಎಂಬಾತನಿಂದ ಖರೀದಿಸಿರುವ ಕುರಿತು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.