ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿಯೊಬ್ಬ ಮನಷ್ಯನಿಗೂ ನಮ್ಮ ಸಂಸ್ಕೃತಿ ಹೊರೆಸಿರುವ ದೈವ ಋಣ, ಪಿತೃ ಋಣ, ಆಚಾರ್ಯ ಋಣ, ಸಮಾಜದ ಋಣ ಎಂಬ ನಾಲ್ಕು ಋಣಗಳನ್ನು ತೀರಿಸುವ ಹೊಣೆ ಇದೆ. ಇವು ಕೇಳಲು ಸರಳ ಎನಿಸಿದರೂ ತೀರಿಸಲು ಒಂದು ಜನ್ಮ ಸಾಲದು. ಋಣಮುಕ್ತರಾಗುವಲ್ಲಿಯೇ ಬದುಕಿನ ಸಾರ್ಥಕ್ಯವಿದೆ ಎಂದು ವೈದ್ಯ, ಸಾಹಿತಿ ಡಾ. ನಾ. ಸೋಮೇಶ್ವರ್ ಹೇಳಿದರು.

ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಗುರುವಾರ ಸುರಭಿ ರಿ. ಬೈಂದೂರು ಸಂಸ್ಥೆಯ ಸುರಭಿ ಜೈಸಿರಿ ಹಾಗೂ ಬೆಳಿಹಬ್ಬದ ಸಂಭ್ರಮಾಚರಣೆಯಲ್ಲಿ ಸುರಭಿಯ 11ನೇ ಬಿಂದುಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಕೆಲವು ಸೇವೆಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಭವ್ಯ ಭಾರತದ ಭವಿಷ್ಯವನ್ನು ರೂಪಿಸುವ ಅದ್ಯುತ ಶಿಲ್ಪಿಗಳು ಅಧ್ಯಾಪಕರು. ಅವರ ಋಣವನ್ನು ನಾವು ಉತ್ತಮ ವಿಚಾರವನ್ನು ಹಂಚುವ ಮೂಲಕ ತೀರಿಸಬೇಕಾದ ಹೊಣೆ ನಮ್ಮದಾಗಿದೆ. ಚಂದನ ವಾಹಿಯ ನಿರೂಪಕನಾಗಿ ಆ ಕಾರ್ಯವನ್ನು ಆತ್ಮತೃಪ್ತಿಯೊಂದಿಗೆ ಮಾಡುತ್ತಿದ್ದೇನೆ ಎಂದರು.

ಪ್ರಶಸ್ತಿ ಸ್ವೀಕರಿಸುವ ವೇಳೆ ಭಾವುಕರಾಗಿದ್ದ ಅವರು ಮುಂದುವರಿದು ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಸುಮಾರು ಐದು ಸಾವಿರ ವಿದ್ಯಾರ್ಥಿಗಳಿಗೆ ಭಾರತೀಯ ಕಲೆಗಳನ್ನು ದಾಟಿಸುವ ಕಾಯಕದಲ್ಲಿ ತೊಡಗಿರುವ ಸುರಭಿ ತಂಡ ಸಮಾಜದ ಋಣ ತೀರಿಸುತ್ತಾ ಋಣಮುಕ್ತವಾಗುತ್ತಿದೆ ಎಂದರು.

ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಶಸ್ತಿಗಳು ಎಷ್ಟು ಬಂತು ಎಂದು ಲೆಕ್ಕಹಾಕುವ ಬದಲಿಗೆ ಅದನ್ನು ಯಾರಿಗೆ ಕೊಡುವುದರಿಂದ ಮೌಲ್ಯ ಹೆಚ್ಚಾಯಿತೆಂದು ಸಂಘಟನೆಗಳು ಭಾವಿಸುವಂತಾದರೆ, ಪ್ರಶಸ್ತಿ ಸ್ವೀಕರಿಸುವ ಜೊತೆಗೆ ತಮ್ಮವರೆಲ್ಲರನ್ನೂ ನೆನೆಯುತ್ತಾ ಸ್ವೀಕರಿಸುವವರು ಅದರ ಸಾರ್ಥಕ್ಯತೆ ಅನುಭವಿಸಿದರೆ ಪ್ರಶಸ್ತಿಯ ಘನತೆ ಹೆಚ್ಚುತ್ತದೆ. ಬಿಂದುಶ್ರೀ ಪ್ರಶಸ್ತಿ ನಾ. ಸೋಮೇಶ್ವರ ಅವರಿಗೆ ನೀಡುವ ಅಂತಹ ಸುಂದರ ಕ್ಷಣಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂಬುದೇ ಸಂತಸ ಎಂದರು.
ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಆಶಯ ನುಡಿಗಳನ್ನಾಡಿದರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಅಭಿನಂದನಾ ನುಡಿಗಳನ್ನಾಡಿದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಎಚ್. ವಸಂತ ಹೆಗ್ಡೆ, ಉದ್ಯಮಿ ಚಂದ್ರಶೇಖರ್ ಕಲ್ಪತರು, ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ., ಸುರಭಿ ಪ್ರಾಕ್ತನ ವಿದ್ಯಾರ್ಥಿನಿ ಬಿಂದುಶ್ರೀ ಸನತ್ ಸುರತ್ಕಲ್, ಸುರಭಿ ನಿರ್ದೇಶಕ ಸುಧಾಕರ ಪಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ ಉಪಸ್ಥಿತರಿದ್ದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ಜಯಾನಂದ ಹೋಬಳಿದಾರ್ ಅವರನ್ನು ಸನ್ಮಾನಿಸಲಾಯಿತು. ಸುರಭಿ ಭರತನಾಟ್ಯ ಗುರುಗಳಾದ ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಅವರಿಗೆ ಗುರುವಂದನೆ, ಸುರಭಿ ನಿರ್ದೇಶಕರಾದ ಗಣಪತಿ ಹೋಬಳಿದಾರ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.



ಸುರಭಿ ಬೈಂದೂರು ಅಧ್ಯಕ್ಷ ಆನಂದ ಮದ್ದೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿಕಟಪೂರ್ವಾಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ, ಉಪಾಧ್ಯಕ್ಷ ಲಕ್ಷ್ಮಣ ಕೊರಗ ಬೈಂದೂರು ವಂದಿಸಿದರು. ಸುರಭಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮಂಜುನಾಥ ದೇವಾಡಿಗ ಹಾಗೂ ಗಣೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುರಭಿ ವಿದ್ಯಾರ್ಥಿಗಳಿಂದ ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕನೃತ್ಯ ನೃತ್ಯಾಂಕುರ ಭರತನಾಟ್ಯ ಹಾಗೂ ದಶಾವತಾರ ನೃತ್ಯ ರೂಪಕ ನಡೆಯಿತು.