ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸಂತ ಜೊಸೆಫರ ಶಾಲೆಯಲ್ಲಿ ಉತ್ತರ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಶಿಕ್ಷಣದ ಬೆಳಕನ್ನು ಹುಡುಕಿಕೊಂಡು ಬಂದ ವಿದ್ಯಾರ್ಥಿನಿಯರಿದ್ದಾರೆ. ಆ ಎಲ್ಲ ಮಕ್ಕಳು, ಸುತ್ತಮುತ್ತಲಿನ ಅನೇಕ ನಾಗರೀಕರು ಮತ್ತು ಕಾನ್ವೆಂಟಿನ ಸಿಸ್ಟರ್ ಗಳು ನಮ್ಮೊಂದಿಗೆ ಅಮವಾಸ್ಯೆ ರಾತ್ರಿಯ ಆಕಾಶವನ್ನು ಕಣ್ತುಂಬಿಕೊಳ್ಳಲು ಒಟ್ಟಿಗೆ ಸೇರಿದ್ದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಕುಂದಾಪುರ ಘಟಕ ಹಮ್ಮಿಕೊಂಡ ʻನಕ್ಷತ್ರʼ ಆಕಾಶ ವೀಕ್ಷಣೆಯ ಈ ಕಾಯಕ್ರಮ ಆರಂಭವಾದದ್ದು ರವಿ ಕಟ್ಕೆರೆ ಮತ್ತು ಸಂಧ್ಯಾ ನಾಯಕರವರ ಹಾಡಿನೊಂದಿಗೆ. ಇವರಿಬ್ಬರ ದನಿಗೆ ಮಕ್ಕಳು ದನಿಗೂಡಿಸುತ್ತಾ ಸಚಿನ್ ಅಂಕೋಲಾರವರ ಬಾರೆ ಗೆಳತಿ ಬಾರೆ ಹಾಡಿನ ಸಾಲುಗಳನ್ನು ಹಾಡಿದ್ದು ಕಾರ್ಯಕ್ರಮಕ್ಕೆ ಉತ್ತಮ ಪ್ರವೇಶವನ್ನು ಒದಗಿಸಿತು.
ಬಿ.ಜಿ.ವಿ.ಎಸ್. ಕುಂದಾಪುರ ಘಟಕದ ಅಧ್ಯಕ್ಷರಾದ ಆಶಾ ಕರ್ವಾಲೋ ಮತ್ತು ಶಾಲೆಯ ಸಂಚಾಲಕರ ಸಿಸ್ಟರ್ ಸುಪ್ರಿಯಾ ಅವರ ಶುಭಹಾರೈಕೆಗಳ ನಂತರ ಶಿಕ್ಷಕ ಉದಯ ಗಾಂವಕಾರ ಆಕಾಶ ವೀಕ್ಷಣೆಗೆ ಮಕ್ಕಳನ್ನು ಸಜ್ಜುಗೊಳಿಸುವ ತರಗತಿ ನಡೆಸಿದರು. ನಂತರ ಅವರು ಮಕ್ಕಳನ್ನು ಹೊರಗೆ ಕರೆದು ಆಕಾಶದ ಬೆರಗನ್ನು ವ್ಯವಸ್ಥಿತವಾಗಿ ಕಣ್ತುಂಬಿಕೊಳ್ಳುವ ದಾರಿಗಳನ್ನು ತಿಳಿಸಿದರು.
ಶನಿ, ಶುಕ್ರ, ಗುರು, ಮಂಗಳ ಗ್ರಹಗಳು ಅನೇಕ ನಕ್ಷತ್ರ ಪುಂಜಗಳನ್ನು ಗುರುತಿಸಿದರಲ್ಲದೆ ತಾವೇ ತಂತ್ರಾಂಶ ಬಳಸಿ ನಕ್ಷತ್ರಗಳ ಹೆಸರು ಗುರುತಿಸಿದರು. ಬ್ರಹ್ಮಾಂಡದ ಅಗಾಧತೆ, ರಾಶಿಪುಂಜಗಳೆಂದರೇನು? ಏಕೆ ಹಾಗೆ ಕರೆಯುತ್ತಾರೆ? ಜನ್ಮ ನಕ್ಷತ್ರ, ಜನ್ಮ ರಾಶಿ, ನಕ್ಷತ್ರಗಳ ಬಣ್ಣ, ಗೋಚರ ಬೆಳಕು ಇತ್ಯಾದಿ ಚರ್ಚೆಗಳ ನಂತರ ಇಂದಿನ ರಾತ್ರಿಯಾಕಾಶ ಮಕ್ಕಳಿಗೆ ಭಿನ್ನವಾಗಿ ಕಂಡಿತು.










