ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಚಿಂತನೆಗಳಿಲ್ಲದ ಮನುಷ್ಯ, ಮನಸ್ಸಿಲ್ಲದ ದೇಹ ಯಾವಾಗಲೂ ನಿರ್ಜಿವ ಸ್ಥಿತಿಯಲ್ಲಿರುತ್ತದೆ. ಹಣದ ವ್ಯಾಮೋಹದಿಂದ ದೂರವಾದಾಗ ಸಾಹಿತ್ಯ, ನೃತ್ಯ, ಸಂಗೀತಗಳು ಮೌಲ್ಯವಾಗಿ ಕೊರೆಯುತ್ತಿರುತ್ತದೆ. ಶ್ರೀಮಂತಿಕೆಯ ಉದ್ದೇಶಕ್ಕಿಂತ ಧೀಮಂತ ಮನುಷ್ಯರಾಗುವ ಕನಸು ಕಾಣುವಂತಾಗಬೇಕು ಎಂದು ಮೂಡಬಿದ್ರೆ ಆಳ್ವಾಸ ಶಿಕ್ಷಣ ಪ್ರತಿಷ್ಠಾನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನರಾಂ ಸುಳ್ಯ ಹೇಳಿದರು.
ಲಾವಣ್ಯ ಬಂದೂರು ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬಂದೂರು ತಾಲೂಕು ಘಟಕ ಹಾಗೂ ಅಶೋಕ ಜ್ಯುವೆಲ್ಲರ್ಸ್ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಜೆಎನ್‌ಆರ್ ಕಲಾಮಂದಿರದ ಹೊರಾಂಗಣದಲ್ಲಿ ಮೂಡಬಿದ್ರೆ ಆಳ್ವಾಸ ಶಿಕ್ಷಣ ಪ್ರತಿಷ್ಠಾನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ನಾಟಕ ಪ್ರದರ್ಶನದ ಪೂರ್ವದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ರಂಗಭೂಮಿ ಶ್ರಮಜೀವಿಗಳ ಲೋಕ. ವೇದನೆಯನ್ನು ಹಾಡಾಗಿಸಿ, ಸಮುದಾಯವನ್ನು ತಲುಪುವ ಪ್ರಕ್ರಿಯೆಯಲ್ಲಿ ಅದು ನಿರತವಾಗಿದೆ. ಸುಖ:-ದುಖ:ವನ್ನು ಚಂದವಾಗಿ ಅಭಿವ್ಯಕ್ತಿಗೊಳಿಸಲು ರಂಗಭೂಮಿಯಿಂದ ಮಾತ್ರ ಸಾಧ್ಯ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕ ಡಾ. ಜೀವನರಾಂ ಸುಳ್ಯ ಅವರನ್ನು ಕಸಾಪ ವತಿಯಿಂದ ಗೌರವಿಸಲಾಯಿತು. ಬೈಂದೂರು ತಾಲೂಕು ಕಸಾಪ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಅರುಣ್ ಕುಮಾರ್ ಶಿರೂರು ಅವರಿಗೆ ನಿರ್ಗಮನ ಅಧ್ಯಕ್ಷ ಡಾ. ರಘು ನಾಯ್ಕ್ ಅಧಿಕರ ಹಸ್ತಾಂತರಿಸಿದರು.
ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಉಪಸ್ಥಿತರಿದ್ದರು. ಲಾವಣ್ಯ ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ. ನಾಯಕ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವಂದಿಸಿದರು. ಸದಸ್ಯ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು. ನಂತರ ಆಳ್ವಾಸ ಶಿಕ್ಷಣ ಪ್ರತಿಷ್ಠಾನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಚಾರುವಸಂತ 25ನೇ ಪ್ರದರ್ಶನ ನೀಡಿದರು.
ಸಾಹಿತ್ಯವು ಮೌಲ್ಯಭರಿತವಾಗಲು ಆಧ್ಯಾತ್ಮಿಕ ಜ್ಞಾನ, ಅಭ್ಯಾಸ, ಸಂಸ್ಕಾರ, ಮೌಲ್ಯಗಳು ಬರಹಗಾರರಲ್ಲಿ ಸಮ್ಮಿಳಿತವಾಗಿರಬೇಕು. ಜನಪದ ಮತ್ತು ಶಿಷ್ಟಮಹಾಕಾವ್ಯಗಳ ತಿರುಳು ಆಧ್ಯಾತ್ಮಿಕ ಬದುಕಿನ ದರ್ಶನ. ಇಂತಹ ಸಾಹಿತ್ಯವನ್ನು ಇಂದಿನ ಸಾಹಿತಿಗಳು ನಿಷ್ಟೆಯಿಂದ ಅಧ್ಯಯನ ಮಾಡುವ ಮೂಲಕ ಗಟ್ಟಿ ಸಾಹಿತ್ಯ ಹಾಗೂ ಶ್ರೇಷ್ಠ ಸಾಹಿತ್ಯ ಸೃಷ್ಠಿ ಮಾಡುವಂತಾಗಬೇಕು. ಕಲೆ, ಸಾಹಿತ್ಯ, ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಬೈಂದೂರಿನ ಕೊಡುಗೆ ಅಪಾರವಾಗಿದ್ದು, ಉತ್ತಮ ಮಟ್ಟದ ಸಾಂಸ್ಕ್ರತಿಕ ಹಿನ್ನಲೆ ಹೊಂದಿದೆ. ಕ್ಷೇತ್ರದ ಸಾಹಿತ್ಯಾಭಿಮಾನಿಗಳ ಸಾಂಘಿಕ ಸಂಭ್ರಮ ಮೇಳೈಸಲಿ – ನೀಲಾವರ ಸುರೇಂದ್ರ ಅಡಿಗ ಕಸಾಪ ಜಿಲ್ಲಾಧ್ಯಕ್ಷರು