ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶಾರದಾ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳು ಅವರವರ ಮನೆಯಂಗಳದಲ್ಲಿ ಬೆಳೆದ ಬಣ್ಣ-ಬಣ್ಣದ ವಿವಿಧ ಹೂವುಗಳನ್ನು ತಂದು ವಿದ್ಯಾ ಸರಸ್ವತಿಯಾದ ತಾಯಿ ಶಾರದೆಗೆ ಭಕ್ತಿಭಾವದಿಂದ ಅರ್ಪಿಸಿದರು.
ಕಾರ್ಯಕ್ರಮದ ಉದ್ದಕ್ಕೂ ವಿದ್ಯಾರ್ಥಿಗಳು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ, ಮಂಗಳಕರವಾದ ವಾತಾವರಣವನ್ನು ಸೃಷ್ಟಿಸಿದರು. ಸಹಶಿಕ್ಷಕರಾದ ರಾಮಕೃಷ್ಣ ಉಡುಪರು ಶಾಸ್ತ್ರೋಕ್ತವಾಗಿ ಮಂತ್ರಗಳನ್ನು ಪಠಿಸಿ ತಾಯಿ ಶಾರದೆಯ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಮಕ್ಕಳಿಗೆ ತಾಯಿ ಸರಸ್ವತಿಯ ಮಹಿಮೆ ಮತ್ತು ವಿದ್ಯೆಯ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಯಿ ಶಾರದೆಯನ್ನು ಪೂಜಿಸಿ, “ಉತ್ತಮ ವಿದ್ಯೆ ಹಾಗೂ ಬುದ್ಧಿ ಪ್ರಾಪ್ತಿಯಾಗಲಿ” ಎಂಬ ಮಕ್ಕಳ ಮುಗ್ಧ ಮನಸ್ಸಿನ ಪ್ರಾರ್ಥನೆ, ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿತು.