ಕುಂದಾಪ್ರ ಡಾಟ್ ಕಾಂ ಮೊಬೈಲ್ App ಬಿಡುಗಡೆಗೊಳಿಸಿ ಮಾತನಾಡಿದ ವಾಟ್ಸಪ್ ಹೀರೋ
ಕುಂದಾಪುರ: ಕ್ಷಣಾರ್ಧದಲ್ಲಿ ಸುದ್ದಿಯಲ್ಲಿ ಪ್ರಪಂಚದ ಮೂಲೆ ಮೂಲೆಗಳಿಗೂ ತಲುಪಿಸುವಷ್ಟು ಸಶಕ್ತವಾದ ತಂತ್ರಜ್ಞಾನ ಇಂದು ಬೆಳೆದು ನಿಂತಿದೆ. ದೂರದಲ್ಲಿ ಘಟಿಸುವ ಘಟನೆಗಳು ನಿರೀಕ್ಷೆಗಿಂತ ವೇಗವಾಗಿ ತಲುಪಿ ಚರ್ಚೆಯ ವಸ್ತುವಾಗುತ್ತಿರುವ ಹೊತ್ತಿನಲ್ಲಿ ನಮ್ಮೂರಿನ ವೈಶಿಷ್ಟ್ಯಗಳನ್ನು ಮೊದಲು ನಮ್ಮವರಿಗೆ ತಲುಪಿಸಬೇಕೆಂಬ ತುಡಿತ ವಿಶೇಷವಾದುದು. ಕುಂದಾಪುರದ ಸಂಸ್ಕೃತಿ, ಭಾಷಾ ಸೊಗಡು ಎಲ್ಲವನ್ನು ದಿನನಿತ್ಯದ ಆಗುಹೋಗುಗಳೊಂದಿಗೆ ಕಟ್ಟಿಕೊಡುವ ಪ್ರಯತ್ನ ಶ್ಲಾಘನೀಯ ಎಂದು ಶಿಕ್ಷಕ, ಸಾಮಾಜಿಕ ತಾಣದ ವಿಶಿಷ್ಟ ಧ್ವನಿ ಮನೋಹರ ಹಂದಾಡಿ(ಮನು ಹಂದಾಡಿ) ಹೇಳಿದರು.
ಅವರು ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜಿನ ಎ.ವಿ. ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಂದಾಪ್ರ ಡಾಟ್ ಕಾಂ ಮೊಬೈಲ್ ಆಪ್ ಬಿಡುಗಡೆಗೊಳಿಸಿ ಮಾತನಾಡಿದರು. ಇಂದು ಮೊಬೈಲ್ ಇಲ್ಲದ ಕೈಗಳಿಲ್ಲ. ಅದು ನಮ್ಮ ಬದುಕನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಎಲ್ಲವನ್ನೂ ಮೊಬೈಲ್ ಭಾಷೆಯಲ್ಲಿಯೇ ಸಂವಹನಿಸಬೇಕಾದ ಕಾಲಘಟ್ಟದಲ್ಲಿ ಕುಂದಾಪ್ರ ಡಾಟ್ ಕಾಂ ಮೊಬೈಲ್ ಆಪ್ ಪರಿಚಯಿಸಿ ಕುಂದನಾಡಿನ ಸೊಗಡನ್ನು ಮತ್ತಷ್ಟು ಸುಲಭವಾಗಿ ಓದುಗರಿಗೆ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದು ಶ್ಲಾಘನೀಯ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಎಎಸ್‌ಎನ್ ಹೆಬ್ಬಾರ್ ಮಾತನಾಡಿ ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಬೆರಗು ಹುಟ್ಟಿಸುವಂತದ್ದು. ಕುಂದಾಪ್ರ ಕನ್ನಡಕ್ಕೆ ತನ್ನದೇ ವೈಶಿಷ್ಟ್ಯತೆ ಇದೆ. ಭಾಷೆಯೊಳಗಿನ ರಭಸ, ಶಕ್ತಿ ಭಾಷೆಯ ಸೊಗಡನ್ನು ಹೆಚ್ಚಿಸಿದೆ. ಕಲಾಕ್ಷೇತ್ರ ಕುಂದಾಪುರ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ ಪ್ರತಿಭೆಯಿದ್ದವರು ಎಲ್ಲೇ ಇದ್ದರೂ ಬೆಳೆಯುತ್ತಾರೆ. ಮಾಧ್ಯಮದ ಸವಾಲುಗಳನ್ನು ಎದುರಿಸಿಕೊಂಡು ಕುಂದಾಪ್ರ ಡಾಟ್ ಕಾಂ ಮತ್ತಷ್ಟು ಬೆಳೆಯುವಂತಾಗಲಿ ಎಂದರು.
ಸುದ್ದಿಮನೆ ವಾರಪತ್ರಿಕೆ ಸಂಪಾದಕ ಸಂತೋಷ್ ಕೋಣಿ ಶುಭಶಂಸನೆಗೈಯುತ್ತಾ ಒಳ್ಳೆಯದನ್ನು ಪ್ರಶಂಸಿಸುವ ಕೆಟ್ಟದ್ದನ್ನು ಖಂಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇವೆರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಮನೋಭಾವ ಒಳ್ಳೆಯದಲ್ಲ. ಮಾಧ್ಯಮಗಳ ಕೆಡುಕುಗಳನ್ನು ದೂಷಿಸುವ ಮೊದಲು ನಾವು ಬದಲಾಗಬೇಕಾದುದು ಬಹುಮುಖ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಂಡಾರ್‌ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ ಮಾತನಾಡಿ ನಾವೇನು ಮಾತನಾಡಿದರೂ ಅದಕ್ಕೆ ಪ್ರತಿರೋಧ ಎದುರಿಸಬೇಕಾದ ಆತಂಕದ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ನಮ್ಮ ನೇರ ಹಾಗೂ ಸಕಾರಾತ್ಮವಾದ ನಡೆ ನಕಾರಾತ್ಮಕ ಅಂಶಗಳನ್ನು ಮೆಟ್ಟಿ ನಿಲ್ಲುವ ತಾಕತ್ತು ಹೊಂದಿದೆ. ತಂತ್ರಜ್ಞಾನವನ್ನು ಆವಹಿಸಿಕೊಂಡು ಮುನ್ನಡೆಯುತ್ತಿರುವ ದೇಶವನ್ನು ಮತ್ತಷ್ಟು ಶಕ್ತಿಯುತವಾದುದು ಎಂದು ತೋರಿಸಿಕೊಡುವ ತಾಕತ್ತು ನಮ್ಮಲಿದೆ ಎಂದು ಹೇಳಿದ್ದರು.
ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಪ್ರಾರ್ಥಿಸಿದರು. ಕುಂದಾಪ್ರ ಡಾಟ್ ಕಾಂನ ಪ್ರವೀಣ ಟಿ. ಬೈಂದೂರು ಧನ್ಯವಾದಗೈದರು. ಉಪನ್ಯಾಸಕ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಮೊಬೈಲ್ ಗಳಿಗೆ ಕುಂದಾಪ್ರ ಡಾಟ್ ಕಾಂ Mobile APP ಡೌನ್ ಲೋಡ್ ಮಾಡಿಕೊಳ್ಳಬೇಕಾದರೇ, ಮೊಬೈಲ್ ನಲ್ಲಿ ಈ ಲಿಂಕ್ ಕ್ಲಿಕ್ ಮಾಡಿ ( https://play.google.com/store/apps/details?id=com.kundapra.news ) ಅಥವಾ ನೇರವಾಗಿ ಪ್ಲೇ ಸ್ಟೋರ್ ಗೆ ಹೋಗಿ kundapra.com ಅಂತ ಸರ್ಚ್ ಮಾಡಿ ಅಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
ಬೆಂಗಳೂರಿನ ಇರೆಲೆಗೋ ಕಂಪೆನಿ ಮೊಬೈಲ್ ಕುಂದಾಪ್ರ ಡಾಟ್ ಕಾಂ Mobile APP ಅಭಿವೃದ್ಧಿಪಡಿಸಿದೆ.