ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಮಂಗಳವಾರದಂದು ಕರಕುಶಲ ಕಲೆಗಳ ಪ್ರಾತ್ಯಕ್ಷತೆಯ ಕಾರ್ಯಕ್ರಮವು ’ಜ್ಞಾನನಿಕೇತನ’ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತ ಸರಕಾರದ ಜವಳಿ ಸಚಿವಾಲಯದ ಸಹಾಯಕ ನಿರ್ದೇಶಕರಾದ ರಾಜೇಶ್ವರಿ ಕೆ. ಎಮ್. ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಡಿಜಿಟಲೀಕರಣ ಇರುವುದು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೇ ವಿನಃ ಮನೋರಂಜನೆಗಾಗಿ ಅಲ್ಲ. ಭಾರತೀಯ ಪರಂಪರೆಯಲ್ಲಿ ಕರಕುಶಲಕಲೆಗಳು ವಿಶಿಷ್ಟವಾದ ಸ್ಥಾನಮಾನವನ್ನು ಪಡೆದುಕೊಂಡಿವೆ. ಈ ಕಲೆಗಳು ನಿಮ್ಮ ಜೀವನಕ್ಕೆ ಸಹಾಯಕವಾಗಿವೆ. ಮುಂದೆ ನೀವು ಉದ್ಯೋಗಕ್ಕೆ ಸೇರುವಾಗ ನಿಮ್ಮ ಪಠ್ಯವಿಷಯವು ಮಾತ್ರ ಕಾರಣವಾಗದೇ ನಿಮ್ಮ ಕೈಚಳಕ, ಆಸಕ್ತಿಗಳೂ ಕಾರಣವಾಗುತ್ತವೆ. ಈ ಕರಕುಶಲತೆಗಳು ಜೀವನಕ್ಕೆ ಬೆಳಕಾಗುತ್ತವೆ. ಎನ್ನುತ್ತಾ ವಿದ್ಯಾರ್ಥಿಗಳನ್ನು ಕರಕುಶಲತೆಗಳ ಅಧ್ಯಯನಕ್ಕೆ ಹುರಿದುಂಬಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಜನಾರ್ದನ ರಾವ್ ಹಾವಂಜೆ ಮಾತನಾಡಿ, ಕೊಂಕಣ ಕರಾವಳಿ ಭಾಗದ ಪುರಾತನ ಕಲೆ ಕಾವಿಕಲೆ. 13ನೇ ಶತಮಾನದಿಂದಲೂ ಈ ಕಲೆ ಬಹಳವಾಗಿ ಬಳಕೆಯಾಗುತ್ತಿದ್ದು, ಸುಣ್ಣದ ಗಾರೆಯನ್ನು ನಡೆಸಿದ ಕಟ್ಟಡಗಳಲ್ಲಿ ಇದನ್ನು ನಡೆಸುತ್ತಿದ್ದರು. ಮನೆ ಮತ್ತು ದೇವಾಲಯಗಳ ನಿರ್ಮಾಣದಲ್ಲಿ ಸುಣ್ಣದ ಬಳಕೆ ಸಾಮಾನ್ಯವಾಗಿರುತ್ತಿತ್ತು. ಕಲೆಯನ್ನು ಅರಿತು ಬೆಳೆಯುವುದರಿಂದ ನಿಮ್ಮ ಜೀವನ ಸಮಾಜಮುಖಿಯಾಗಿ ಬೆಳೆಯುತ್ತದೆ ಎಂದು ತಿಳಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರು ಮಾತನಾಡಿ, ಅಬ್ದುಲ್ ಕಲಾಂ ಅವರು ಹೇಳುವಂತೆ ನಾಗರೀಕತೆಯ ಹಸ್ತಾಕ್ಷರವೇ ಕಲೆ. ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿಕೊಳ್ಳಬೇಕಾದರೆ ಕಲೆ ಬೇಕು. ನಮ್ಮ ಜೀವನದ ಕೊಳೆಯನ್ನು ತೆಗೆಯಲು ಕಲೆ ಬೇಕು. ಪದ-ವಾಕ್ಯಗಳಿಲ್ಲದೇ ಕಥೆಗಳನ್ನು, ವಿಚಾರವನ್ನು ಬೋಧಿಸುವ ಸಾಮರ್ಥ್ಯ ಕಲೆಗಿದೆ. ಆದ್ದರಿಂದ ವಿದ್ಯಾರ್ಥಿಗಳು ಕರಕುಶಲಕಲೆಗಳ ಅಧ್ಯಯನವನ್ನು ಶಾಲಾಪಾಠ್ಯಕ್ರಮದ ಜೊತೆ ಜೊತೆಯಲ್ಲಿ ನಡೆಸಬೇಕು ಎಂದು ಕರೆ ನೀಡಿದರು.
ನಂತರ ಮಣ್ಣಿನ ಸಾಮಗ್ರಿಗಳ ರಚನೆ, ಆಭರಣ ತಯಾರಿಕೆ, ತೆಂಗಿನಚಿಪ್ಪಿನ ಕಲಾಕೃತಿ ಮತ್ತು ಕಾವಿಕಲೆಯ ಸಂರಚನೆಯನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆಸಿ ತಿಳಿಸಿಕೊಡಲಾಯಿತು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ರಘುರಾಮ ಕುಲಾಲ, ಆಲೂರು, ಶ್ರೀಮತಿ ಪರಿಮಳ, ರೂಪಾ ರಾವ್ ಮತ್ತು ಶಾಲಾ ಆಡಳಿತಾಧಿಕಾರಿಗಳಾದ ವೀಣಾರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಉಪಸ್ಥಿತರಿದ್ದರು. ಶಿಕ್ಷಕ ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.
ವಿದ್ಯಾರ್ಥಿ ಸಮರ್ಥ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿ, ವಿದ್ಯಾರ್ಥಿನಿ ಸಾನ್ವಿ ಕೆ. ಎಸ್. ಸ್ವಾಗತಿಸಿ, ವಿದ್ಯಾರ್ಥಿನಿ ಸಮೃದ್ಧಿ ಧನ್ಯವಾದವನ್ನು ಸಮರ್ಪಿಸಿದರು.















