ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2025-26ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಬೈಂದೂರು ವಲಯದ ಕಂಚಿಕಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ತಿಮ್ಮಪ್ಪ ಗಾಣಿಗ ತಗ್ಗರ್ಸೆ ಅವರು ಆಯ್ಕೆಯಾಗಿರುತ್ತಾರೆ.
ಅವರು ಕಾರ್ಕಳ ತಾಲೂಕಿನ ಜೋಗುಳ ಬೆಟ್ಟು, ಬೈಂದೂರು ವಲಯದ ಕೋಯಾನಗರ, ನಾಯ್ಕನಕಟ್ಟೆ, ಬೈಂದೂರು ಶಾಲೆಗಳಲ್ಲಿ 25 ವರ್ಷ ಸಹಶಿಕ್ಷಕರಾಗಿ, ತಗ್ಗರ್ಸೆ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.
ಪ್ರಸ್ತುತ ಕಳೆದ 4 ವರ್ಷಗಳಿಂದ ಕಂಚಿಕಾನು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು 35 ವರ್ಷಗಳ ಸೇವೆಯಲ್ಲಿ ಉತ್ತಮ ತರಗತಿ ಶಿಕ್ಷಕರಾಗಿ , ಮುಖ್ಯ ಶಿಕ್ಷಕರಾಗಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿರುತ್ತಾರೆ .
ಅವರು ಸಂಪನ್ಮೂಲ ವ್ಯಕ್ತಿಯಾಗಿ, ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ಸೇವೆ ಸಲ್ಲಿಸಿದ ಶಾಲೆಗಳಲ್ಲಿ ಮತ್ತು ಬೇರೆ ಬೇರೆ ಶಾಲೆಗಳ ಮಕ್ಕಳಿಗಾಗಿ ಅನೇಕ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ರಂಗದಲ್ಲಿ ಪ್ರದರ್ಶಿಸಿ ಮಕ್ಕಳಿಗೆ ರಂಗ ಕಲೆಯಲ್ಲಿ ಆಸಕ್ತಿ ಮೂಡಿಸಿರುತ್ತಾರೆ.
ಯಕ್ಷಗಾನ ತಾಳಮದ್ದಳೆ ಗಳಲ್ಲಿ ಅರ್ಥಧಾರಿಯಾಗಿಯೂ ಭಾಗವಹಿಸಿರುವ ಇವರು ಹವ್ಯಾಸಿ ಕಲಾವಿದರಿಗೆ ಯಕ್ಷಗಾನ ಅರ್ಥಗಾರಿಕೆ ಅಭ್ಯಾಸ ಮಾಡಿಸಿ ರಂಗದಲ್ಲಿ ಪ್ರದರ್ಶಿಸುವಲ್ಲಿ ತನ್ನನ್ನು ತೊಡಗಿಸಿಕೊಂಡು ಜನಪ್ರಿಯರಾಗಿರುತ್ತಾರೆ.
ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವ ಶ್ರೀಯುತರು ಜಿಲ್ಲಾ ಶಿಕ್ಷಕ ಸಂಘಟನೆಯಲ್ಲಿಯೂ ಪದಾಧಿಕಾರಿ ಯಾಗಿರುತ್ತಾರೆ.ಈ ಹಿಂದೆ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಗ್ರಾಮೀಣ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರಾಗಿ ಸಾಧನೆ ಮಾಡಿರುತ್ತಾರೆ.















