ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಘಟಕ ಹಾಗೂ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆಯ ಸಂಘದ ಸಹಯೋಗದೊಂದಿಗೆ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ‘ಫೈನಾನ್ಸಿಯಲ್ ಸ್ಕಿಲ್ ಡೆವಲಪ್ಮೆಂಟ್’ ಎನ್ನುವ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬೆಂಗಳೂರಿನ ಎಂ.ಎಫ್.ಕೆ ಫೌಂಡೇಶನ್ ನ ಸಾಂಸ್ಥಿಕ ಪಾಲುದಾರಿಕೆಗಳ ಮುಖ್ಯಸ್ಥೆ ಅರ್ಪಣಾ ಭಟ್ ನಡೆಸಿಕೊಟ್ಟರು. ಅವರು ಶೈಕ್ಷಣಿಕ ಕಲಿಕೆ ಮತ್ತು ಉದ್ಯಮದ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮಹತ್ವವನ್ನು ಒತ್ತಿ ಹೇಳಿದರು. ಕಾರ್ಪೊರೇಟ್ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಪ್ರಾಯೋಗಿಕ ತರಬೇತಿ ಕೌಶಲ್ಯ ಮತ್ತು ವೃತ್ತಿಪರ ಸಂಪನ್ಮೂಲಗಳನ್ನು ಪಡೆದುಕೊಳ್ಳಬೇಕಾದ ಮಹತ್ವವನ್ನು ತಿಳಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸುವವರನ್ನು ಕಲಿಕೆ, ನಿರ್ವಹಣಾ ವ್ಯವಸ್ಥೆಗಳು (LMS) ಮತ್ತು ನೇರ ತರಬೇತಿ ಅವಧಿಗಳು ಸೇರಿದಂತೆ ಎಂ.ಎಫ್.ಕೆ ಯ ಉಚಿತ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಪರಿಚಯಿಸಿದರು.
ಕಾರ್ಯಕ್ರಮದ ಪ್ರಮುಖ ಭಾಗವಾಗಿ ಬೆಂಗಳೂರಿನ ಎಂ ಎಫ್ ಕೆ ಫೌಂಡೇಶನ್ ಮತ್ತು ಮೂಡ್ಲಕಟ್ಟೆ ಪದವಿ ಕಾಲೇಜಿನ ನಡುವೆ ಶೈಕ್ಷಣಿಕ ಒಡಂಬಡಿಕೆಗೆ (MOU) ಸಹಿ ಹಾಕಲಾಯಿತು. ಇದು ಸಾಂಸ್ಥಿಕ ಸಹಯೋಗ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿಗೆ ದಾರಿ ಮಾಡುವ ಮಹತ್ವದ ಹೆಜ್ಜೆಯಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್ ವಹಿಸಿದ್ದರು.
ಉಪ ಪ್ರಾಂಶುಪಾಲರಾದ ಜಯಶೀಲ್ ಕುಮಾರ್, ಕಾಲೇಜಿನ ಉದ್ಯೋಗ ಮತ್ತು ತರಬೇತಿ ಅಧಿಕಾರಿ ದೀಕ್ಷಾ ಹರೀಶ್ ಜೆಪ್ಪು, ಉಪನ್ಯಾಸಕ ವೃಂದದವರು ಹಾಗೂ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕು. ಅಂಕಿತಾ ಕೆ. ಶೆಣೈ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ತೃತೀಯ ಬಿಕಾಂ ವಿದ್ಯಾರ್ಥಿನಿ ಅಲ್ಫಿದಾ ಕಾರ್ಯಕ್ರಮವನ್ನು ನಿರೂಪಿಸಿದರು.















