ಕುಂದಾಪುರ: ದಿನನಿತ್ಯದ ಜಂಜಾಟದ ಬದುಕಿನ ನಡುವೆ ಕಾರ್ಟೂನ್ ಎಂತವರಲ್ಲೂ ಒಂದು ಕ್ಷಣ ಮಂದಹಾಸ ಮೂಡಿಸಿ ಲವಲವಿಕೆಯಿಂದಿರುವಂತೆ ಮಾಡುತ್ತದೆ ಎಂದು ಮತ್ಸ್ಯೋದ್ಯಮಿ ಆನಂದ ಸಿ. ಕುಂದರ್ ಹೇಳಿದರು.
ಅವರು ಕಾರ್ಟೂನ್ ಕುಂದಾಪುರ ಆಶ್ರಯದಲ್ಲಿ ಕಾರ್ಟೂನಿಷ್ಠ ಸತೀಶ್ ಆಚಾರ್ಯ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ’ಕಾರ್ಟೂನು ಹಬ್ಬ’ವನ್ನು ಕಾರ್ಟೂನು ಬಿಡಿಸಿ ಉದ್ಘಾಟಿಸಿ ಮಾತನಾಡಿ ದೇಶಕ್ಕೆ ಹಲವಡೆ ನೆಲೆಸಿರುವ ಕುಂದಾಪುರ ಮೂಲದ ವ್ಯಂಗ್ಯಚಿತ್ರಕಾರರು ಮತ್ತಷ್ಟು ಹೆಸರು ಮಾಡಲಿ ಎಂದು ಹಾರೈಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಕಾರ್ಟೂನು ಡೈಲಾಗ್ ಬರೆಯುವ ಸಾರ್ವಜನಿಕ ಸ್ವರ್ಧೆಯನ್ನು ಉದ್ಘಾಟಿಸಿದ ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ ಮಾತನಾಡಿ ಪ್ರಪಂಚದ ೨೦ ಶ್ರೇಷ್ಠ ವ್ಯಂಗ್ಯಚಿತ್ರಕಾರರ ಪೈಕಿ ನಮ್ಮೂರಿನ ಸತೀಶ್ ಆಚಾರ್ಯ ಅವರ ಹೆಸರಿರುವುದು ಹೆಮ್ಮೆಯ ವಿಚಾರ. ಹುಟ್ಟೂರಿನಲ್ಲಿದ್ದುಕೊಂಡೇ ಕಾರ್ಟೂನ್ ಲೋಕದಲ್ಲಿ ತೊಡಗಿಸಿಕೊಂಡು, ಇತರರಿಗೂ ಕಾರ್ಟೂನು ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಕುಂದಾಪುರ ಟ್ರಾಫಿಕ್ ಎಎಸ್‌ಐ ಸುದರ್ಶನ್ ಸೆಲ್ಫಿ ಕಾರ್ನರ್ ಉದ್ಘಾಟಿಸಿದರು. ಉದ್ಯಮಿ ಕೆ. ಆರ್. ನಾಯ್ಕ್, ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ, ಪತ್ರಕರ್ತ ಉದಯ ಆಚಾರ್, ಹವ್ಯಾಸಿ ಕಾರ್ಟೂನಿಷ್ಠ ಕೇಶವ ಸಸಿಹಿತ್ಲು ಉಪಸ್ಥಿತರಿದ್ದರು. ಕಾರ್ಟೂನಿಷ್ಠ ಸತೀಶ್ ಆಚಾರ್ಯ ಸ್ವಾಗತಿಸಿ, ಪತ್ರಕರ್ತ ರಾಮಕೃಷ್ಣ ಹೇರ್ಳೆ ನಿರೂಪಿಸಿದರು.