ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನುಷ್ಯನಿಗೆ ಕಣ್ಣು ಅತ್ಯವಶ್ಯಕ. ಕಣ್ಣಿನ ತೊಂದರೆ ಬರುವ ತನಕ ಕಾಯದೆ ಕಾಲ ಕಾಲಕ್ಕೆ ಕಣ್ಣುಗಳನ್ನು ತಪಾಸಣೆ ಮಾಡಿಸಬೇಕು. ಕಣ್ಣಿನ ದೋಷಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ನಿಯಮಿತ ಆಹಾರ, ತಪಾಸಣೆ ಹಾಗೂ ಚಿಕಿತ್ಸೆ ಇವುಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಮರಣಾನಂತರ ಕಣ್ಣುಗಳನ್ನು ದಾನ ಮಾಡಲು ಮುಂದಾಗಬೇಕು. ಆ ಮೂಲಕ ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗಬೇಕು ಎಂದು ತ್ರಾಸಿ ಕ್ರೈಸ್ಟ್ ಕಿಂಗ್ ಚರ್ಚ್‌ನ ಧರ್ಮಗುರು ರೋಜಾರಿಯೊ ಫೆರ್ನಾಂಡಿಸ್ ಹೇಳಿದರು.
ಅವರು ರೋಟರಿ ಕ್ಲಬ್ ಗಂಗೊಳ್ಳಿ, ಗ್ರಾಮ ಪಂಚಾಯತ್ ತ್ರಾಸಿ, ಕ್ರೈಸ್ಟ್ ಕಿಂಗ್ ಚರ್ಚ್ ತ್ರಾಸಿ ಆರೋಗ್ಯ ಆಯೋಗ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ ಮತ್ತು ಕೆಎಂಸಿ ಆಸ್ಪತ್ರೆ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ತ್ರಾಸಿ ಮಿಲೇನಿಯಂ ಹಾಲ್‌ನಲ್ಲಿ ಭಾನುವಾರ ನಡೆದ ನೇತ್ರ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ಡಿ.ಬಿಜೂರು ಮತ್ತು ಕ್ರೈಸ್ಟ್ ಕಿಂಗ್ ಚರ್ಚ್ ತ್ರಾಸಿ ಆರೋಗ್ಯ ಆಯೋಗದ ಸಂಚಾಲಕ ಮಾರ್ಕ್ ಡಿ ಅಲ್ಮೇಡಾ ಶುಭ ಹಾರೈಸಿದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ನೇತ್ರ ತಜ್ಞ ಡಾ.ದೇವ್ ಉಪಸ್ಥಿತರಿದ್ದರು.
ರೋಟರಿ ಮಾಜಿ ಅಧ್ಯಕ್ಷ ಕೆ.ರಾಮನಾಥ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರದೀಪ್ ಡಿ.ಕೆ. ಅತಿಥಿಗಳನ್ನು ಗೌರವಿಸಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ ಸ್ವಾಗತಿಸಿ, ಚಂದ್ರಕಲಾ ತಾಂಡೇಲ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.















