ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಪಟ್ಟಣ ಪಂಚಾಯತಿಯಿಂದ ಗ್ರಾಮೀಣ ಭಾಗಗಳನ್ನು ವಿರಹಿತಗೊಳಿಸುವಂತೆ ಬೈಂದೂರು ತಾಲೂಕು ರೈತ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ಇಲ್ಲಿನ ಆಡಳಿತ ಸೌಧದ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಗೊಂಡಿದೆ.
ಉದ್ಯಮಿ ನಿತಿನ್ ನಾರಾಯಣ ತಳಿರು ಕಟ್ಟುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿ, ಬೈಂದೂರಿನ ಹಳ್ಳಿಗಳ ಪಾಲಿಗೆ ಪಟ್ಟಣ ಪಂಚಾಯತ್ ನಿರ್ಧಾರ ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಿದೆ. ಅರಣ್ಯ ಪ್ರದೇಶಗಳನ್ನು ಸೇರಿಸಿ ಅವೈಜ್ಞಾನಿಕ ವಿಂಗಡನೆ ಮಾಡಿದ್ದು, ಜನಪ್ರತಿನಿಧಿಗಳು ಸ್ವಲ್ಪ ಪ್ರಾಮಾಣಿಕವಾಗಿ ಗಮನಹರಿಸಿದರೆ ಪರಿಹಾರ ಸಾಧ್ಯ ಎಂದರು.
ಪ್ರತಿಭಟನೆಯ ನೇತೃತ್ವ ವಹಿಸಿರುವ ಬೈಂದೂರು ತಾಲೂಕು ರೈತಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಈಗಾಗಲೆ ಬೈಂದೂರು ಮತ್ತು ಉಡುಪಿಯಲ್ಲಿ ನಮ್ಮ ಆಗ್ರಹ ಈಡೇರಿಸುವಂತೆ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದು, ಸರ್ಕಾರದ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ನ್ಯಾಯ ಸಿಗುವ ವರಗೆ ಹೋರಾಟ ಮುಂದುವರಿಯಲಿದ್ದು, ಎಲ್ಲಾ ಭಾಗದ ರೈತ ಮುಖಂಡರು, ನಾಯಕರು, ಸಾರ್ವಜನಿಕರು ಬೆಂಬಲ ಸೂಚಿಸಿದ್ದಾರೆ. ಪ್ರತಿದಿನ ಒಂದೊಂದು. ಪ್ರದೇಶದದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪ್ರಥಮ ದಿನ ಹೊಸೂರು ಭಾಗದ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.










