ಬೈಂದೂರು: ಜೀವನದಲ್ಲಿ ಗೆಲುವು ಉತ್ಸಾಹ ತಂದರೆ ಸೋಲು ಶಕ್ತಿ ತರುತ್ತದೆ. ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕವಾಗಿಯೂ ಮಕ್ಕಳು ಸಾಧನೆ ಮಾಡಬೇಕು. ಚಹ ಮಾರಿದವರು ಪ್ರಧಾನಿಯಾಗಿರುವುದು ನಮ್ಮ ಕಣ್ಣ ಮುಂದಿದೆ ಹಾಗೇಯೇ ಪ್ರತಿಯೊಬ್ಬರಲ್ಲಿಯೂ ಸುಪ್ತಪ್ರತಿಭೆಗಳರುತ್ತದೆ. ಉತ್ತಮ ವೇದಿಕೆಯ ಮೂಲಕ ಅದನ್ನು ಪ್ರಕಟಿಸಿ ಸಾಧನೆಯ ಮಟ್ಟಿಲನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ ಎಂದು ಕುಂದಾಪುರ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು
ಮೊರಾರ್ಜಿ ದೇಸಾಯಿ ಅಂಗ್ಲಮಾಧ್ಯಮ ವಸತಿಶಾಲೆ ಹೇರೆಂಜಾಲು ಇಲ್ಲಿ ನಡೆದ ಶಾಲಾ ವಾಷಿಕೋತ್ಸವ ಹಾಗೂ ಚಿಣ್ಣರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಂಬದಕೋಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ವಿಶ್ವನಾಥ ಶೆಟ್ಟಿ ಮಾತನಾಡಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿ ಸಾಮಾಜಿಕ ಕಳಕಳಿಯುಳ್ಳ ಯುವಜನಾಂಗ ಸೃಷ್ಠಿಯಾಗಬೇಕು ಎಂದು ಹಿಂದೆ ’ಗುರುವೇ ನಮಃ’ ಎನ್ನುತ್ತದ್ದ ಮಕ್ಕಳು ಇಂದಿನ ದಿನಗಳಲ್ಲಿ ’ಗುರು ಏನ್ ಮಹಾ’ ಎನ್ನುವಂತಹ ಮಟ್ಟಕ್ಕೆ ಬಂದಿರುವುದು ಗುರು-ಶಿಷ್ಯರ ಸಂಬಂಧ ಹಾಗೂ ಬಾಂಧವ್ಯಗಳಲ್ಲಿ ಬಿರುಕು ಕಾಣಿಸುತ್ತಿದೆ. ಇದು ಭವಿಷ್ಯದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದ ಅವರು ಕೇವಲ ಅಂಕ ಗಳಿಕೆಯನ್ನು ಮಾನದಂಡವಾಗಿಸದೇ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಮೌಲ್ಯಮಾಪನ ನಡೆಸಿ ಖುಷಿ ಪರಂಪರೆಯನ್ನು ಮುಂದುವರಿಸುವ ರೂವಾರಿಗಳಾಗಿ ರೂಪಿಸಬೇಕು ಎಂದರು.
ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಹರಿಶ್ ಗಾಂಕರ್ ಅಧ್ಯಕ್ಷತೆವಹಿಸಿದ್ದರು. ಸ್ಥಳೀಯ ಉದ್ಯಮಿ ಹೆಚ್. ವಿಜಯ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್. ಶ್ರೀನಿವಾಸ್, ಶಾಲೆಯ ಪಾಲಕ, ಪೋಷಕ ಪರಿಷತ್ ಅಧ್ಯಕ್ಷ ಗಣೇಶ್ ಪೂಜಾರಿ, ವಿದ್ಯಾರ್ಥಿ ನಾಯಕ ಸತೀಶ್ ಶೆಟ್ಟಿ, ನಾಯಕಿ ದೀಪಾ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಕಮಲಾ ಕೆ.ವಿ ವರದಿ ಮಂಡಿಸಿದರು. ಪ್ರಾಂಶುಪಾಲೆ ಅಕ್ಷತಾ ಶೆಟ್ಟಿ ಸ್ವಾಗತಿಸಿ, ನಳಿನಿ ಥಾಮಸ್ ನಿರೂಪಿಸಿದರು. ರತಿ ಕೆ. ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ನೃತ್ಯ, ಗಾಯನ, ಪ್ರಹಸನ, ನಾಟಕ ಮತ್ತು ಯಕ್ಷಗಾನ ಪ್ರದರ್ಶನ ನಡೆಯಿತು.