ಕೋಟ: ಎರಡು ಜಿಲ್ಲೆಯ ಕಾಂಗ್ರೆಸ್ ಪಕ್ಷ ನಾಯಕರು ಮತ್ತು ಕಾರ್ಯಕರ್ತರು ಡಿಸೆಂಬರ್ ೨೭ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯನ್ನು ಗಭೀರವಾಗಿ ಪರಿಗಣಿಸಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರತಾಪಚಂದ್ರ ಶೆಟ್ಟಿ ಅವರ ಗೆಲುವಿಗೆ ಯಾವುದೆ ಆತಂಕವಿಲ್ಲ, ಕೋಟ ಶ್ರೀನಿವಾಸ ಪೂಜಾರಿ ಅವರಿಗಿಂತ ಅತ್ಯಧಿಕ ಮತಗಳಿಂದ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಕೋಟ ಬ್ಲಾಕ್ ಕಾಂಗ್ರೆಸ್ ಕಛೇರಿ ಇಂದಿರಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಚುನಾವನೆ ಹೇಗಾದರು ಮಾಡಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿಯ ಕಡೆಯವರು ಅನೈತಿಕವಾಗಿ ಮತದಾರರನ್ನು ಸಂಪರ್ಕ ಮಾಡಿ, ತಮ್ಮತ್ತ ಸೆಳೆಯುವ ಕಾರ್ಯ ನಡೆಸುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ನಮ್ಮ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಾಪಚಂದ್ರ ಶೆಟ್ಟಿ ಅವರ ಕುರಿತು ಪೂರಕವಾದ ಅಭಿಪ್ರಾಯ ಮೂಡಿಬರುತ್ತಿದೆ. ಇದಲ್ಲದೆ ಹೆಗ್ಡೆಯವರ ಕುರಿತು ಬಿಜೆಪಿಯಲ್ಲೂ ಕೂಡ ಯಾವುದೇ ಒಲವಿಲ್ಲ. ಕಾಂಗ್ರೆಸ್ ಮತಗಳು ಮಾತ್ರವಲ್ಲದೇ ಬಂಡಾಯ ಅಭ್ಯರ್ಥಿಗಳು ಊಹಿಸದ ರೀತಿಯಲ್ಲಿ ಮತಗಳು ನಮ್ಮ ಪಕ್ಷಕ್ಕೆ ಸಿಗಲಿದೆ. ಪ್ರಾಮಾಣಿಕರಾಗಿದ್ದ ಪ್ರತಾಪಚಂದ್ರ ಶೆಟ್ಟಿ ಅವರು ಕೊನೆಯ ಕ್ಷಣದವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಚಿಂತನೆ ನಡೆಸಿರಲಿಲ್ಲ, ಕಾರ್ಯಕರ್ತರ ಒತ್ತಾಯ ಮತ್ತು ಕಾಂಗ್ರೆಸ್ ಪಕ್ಷ ನೀಡಿದ ಅವಕಾಶ ಅವರನ್ನು ಚುನಾವಣಾ ಅಭ್ಯರ್ಥಿಯಾಗಿ ನಿಲ್ಲುವಂತೆ ಮಾಡಿತ್ತು. ಚುನಾಚಣೆಗೆ ಅವರ ಯಾವುದೇ ಪೂರ್ವ ತಯಾರಿ ಇರಲಿಲ್ಲ, ಆದರೆ ಅವರ ಹಿರಿತನ ಅವರನ್ನು ಮುನ್ನಡೆಸಲಿದೆ ಎಂದರು.
ಪಕ್ಷದಿಂದ ಉಚ್ಛಾಟನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಂದಲ್ಲಿ ಆ ಬಗ್ಗೆ ಸ್ಥಳೀಯ ಬ್ಲಾಕ್ ಕಛೇರಿಯನ್ನು ಸಂಪರ್ಕಿಸಿ ಅವರ ಶಿಫಾರಸ್ಸು ಪಡೆದ ನಂತರ ಪಕ್ಷದಿಂದ ಕೈ ಬಿಡಲಾಗುತ್ತಿದೆ. ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರ ಬಗ್ಗೆ ಯಾವುದೇ ಲಿಖಿತ ದೂರು ಬಾರದ ಹಿನ್ನಲೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಉಳಿದಂತೆ ದೂರು ಬಂದ ಬೆರಳೆಣಿಕೆಯ ಪ್ರಕರಣಗಳನ್ನು ಗಮನಿಸಿ ಉಚ್ಛಾಟನೆ ನಡೆಸಲಾಗಿದೆ ಎಂದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋಪಾಲ ಪೂಜಾರಿ, ಕೋಟ ಬ್ಲಾಕ್ ಅಧ್ಯಕ್ಷ ಶಂಕರ ಕುಂದರ್, ಕಾಂಗ್ರೆಸ್ ಮುಖಂಡ ಸಹಕಾರಿ ಧುರೀಣ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕಾಂಗ್ರೆಸ್ ಮುಖಂಡ ರಾಜು ದೇವಾಡಿಗ, ಕೋಟ ಬ್ಲಾಕ್ ಕಾರ್ಯದರ್ಶಿ ಗೋಪಾಲ ಬಂಗೇರ ಮತ್ತಿತತರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.