ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ.
ರಾಜಕಾರಣದಲ್ಲಿ ಸರಳ, ಸಜ್ಜನಿಕೆಗೆ ಅನ್ವರ್ಥ ಎಂಬಂತೆ ತನ್ನನ್ನು ತೊಡಗಿಕೊಂಡು ಎಲ್ಲರೊಂದಿಗೂ ಬೆರತು ವಿಶ್ವಾಸ ಹಾಗೂ ಘನತೆಯನ್ನು ಉಳಿಸಿಕೊಂಡ ಅಪರೂಪದ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ. ಒಬ್ಬ ಸಾಮಾನ್ಯ ಛಾಯಾಗ್ರಾಹಕನಾಗಿದ್ದ ವ್ಯಕ್ತಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಪರಿಷತ್‌ಗೆ ಆಯ್ಕೆಯಾಗಿ, ಮುಜರಾಯಿ ಮಂತ್ರಿಯೂ ಆದ ಪರಿ ಅಚ್ಚರಿ ಮೂಡಿಸುವಂತದ್ದು. ತನ್ನ ಸ್ಪಷ್ಟವಾದ ಮಾತು, ಒಲವು ನಿಲುವುಗಳಿಂದಲೇ ಸಾಧನೆಯ ಉತ್ತುಂಗಕ್ಕೇರಿ, ಬಿಜೆಪಿ ಪಕ್ಷದಲ್ಲಿಯೂ ಪ್ರಭಾವಿ ನಾಯಕನಾಗಿ ಬೆಳೆದರೂ ಜನಸಾಮಾನ್ಯನಿಗೂ ಸುಲಭವಾಗಿ ದೊರಕುವ ಅವರ ಸರಳ ವ್ಯಕ್ತಿತ್ವ ಇಂದಿಗೂ ಬದಲಾಗಿಲ್ಲ.
ಮೂರ್ತೆದಾರರ ಹೋರಾಟದಲ್ಲಿ ರಾಜ್ಯದ ಗಮನ ಸೆಳೆದಿದ್ದ ಕೋಟ ಶ್ರೀನಿವಾಸ ಪೂಜಾರಿ, 1993ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವಾಗಲೇ 1996ರಲ್ಲಿ ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. ಮುಂದೆ 2006ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆರಿಸಿ ಬಂದರು. 2008ರಲ್ಲಿ ನಡೆದ ಉಪಚುನಾವಣೆಯಲ್ಲಿ ವಿಧಾನಪರಿಷತ್‌ಗೆ ಆಯ್ಕೆಯಾದ ಅವರು 2010ರಲ್ಲಿಯೂ ಮತ್ತೆ ಅವಿರೋಧ ಆಯ್ಕೆಕಂಡರು. ರಾಜ್ಯದಲ್ಲಿ ಬಿಜೆಪಿ ಸರಕಾರದ ಕೊನೆಯ ಅವಧಿಯಲ್ಲಿ ಮುಜರಾಯಿ ಮಂತ್ರಿಯಾಗುವ ಅವಕಾಶ ಶ್ರೀನಿವಾಸ ಪೂಜಾರರಿಗೆ ಬಯಸದೆಯೇ ದೊರೆಕಿತ್ತಾದರೂ ಅದನ್ನು ಸಮರ್ಥವಾಗಿಯೇ ಬಳಸಿಕೊಂಡ ಅವರು ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನಕ್ಕೆ ಗರಿಷ್ಠ ಅನುದಾನ ನೀಡಿದ್ದರು. (ಕುಂದಾಪ್ರ ಡಾಟ್ ಕಾಂ) ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನಲಂಕರಿಸಿ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಬಳಿಕ ಸದ್ಯ ಹಿಂದೂಳಿದ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತ ಅವರ ಆಳವಾದ ಅರಿವು, ಅಧ್ಯಯನ ಹಾಗೂ ಗಟ್ಟಿಧ್ವನಿ ಇಡೀ ವ್ಯವಸ್ಥೆಗೆ ಒಂದಿಷ್ಟು ಬಲ ನೀಡಿದೆ.
ಶ್ರೀನಿವಾಸ ಪೂಜಾರರು ಒಬ್ಬ ಸೃಜನಶೀಲ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಆರಂಭದಲ್ಲಿ ಫೋಟೋಗ್ರಫಿಯನ್ನು ವೃತ್ತಿಯನ್ನಾಗಿಸಿಕೊಂಡ ಅವರು ಬರವಣಿಗೆಯಲ್ಲಿಯೂ ಸಿದ್ಧಹಸ್ತರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಕಾರರಾಗಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಮ್ಮ ಕಮಲ ಎಂಬ ಪಂಚಾಯತ್ ರಾಜ್ ವ್ಯವಸ್ಥೆಯ ಬಗೆಗೆ ಮಾಸ ಪತ್ರಿಕೆಯೊಂದನ್ನು ಆರಂಭಿಸಿ ಅದರ ಸಂಪಾದಕರಾಗಿದ್ದಾರೆ. ಎಂತವರನ್ನೂ ಸೆಳೆಯಬಲ್ಲ ಮಾತಿನ ವರಸೆ ಪೂಜಾರಿಯವರಿಗೆ ಸುಲಭವಾಗಿ ಸಿದ್ಧಿಸಿದೆ. ಡಾ. ಶಿವರಾಮ ಕಾರಂತರ ಅಭಿಮಾನಿಯಾಗಿ ತನ್ನ ಹುಟ್ಟೂರಿನಲ್ಲಿ ಕಾರಂತ ಭವನ ನಿರ್ಮಾಣ, ಕಾರಂತ ಹುಟ್ಟೂರ ಪ್ರಶಸ್ತಿ ಸೇರಿದಂತೆ ಅವರ ನೆನಪನ್ನು ಕೋಟದಲ್ಲಿ ಚಿರಸ್ಥಾಯಿಯಾಗಿಸಿದ ಕೀರ್ತಿಯಲ್ಲಿ ಇವರದ್ದು ದೊಡ್ಡ ಪಾಲಿದೆ. (ಕುಂದಾಪ್ರ ಡಾಟ್ ಕಾಂ)
ಪಂಚಾಯತ್‌ರಾಜ್ ವ್ಯವಸ್ಥೆಯ ಬಗ್ಗೆ ಸದಾ ಧ್ವನಿಯೆತ್ತುತ್ತಾ, ಈ ವ್ಯವಸ್ಥೆಯೊಳಗಿರುವವರಿಗೆ ಧ್ವನಿಯಾಗುತ್ತಾ ಬಂದ ಕೋಟ ಶ್ರೀನಿವಾಸ ಪೂಜಾರಿಯವರು ಈ ಭಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮತ್ತೆ ಕಣದಲ್ಲಿದ್ದಾರೆ. ಈ ಸಂದರ್ಭದಲ್ಲಿ ‘ಕುಂದಾಪ್ರ ಡಾಟ್ ಕಾಂ’ನೊಂದಿಗೆ ಒಂದಿಷ್ಟು ಮಾತನಾಡಿದ್ದಾರೆ.
ಕುಂದಾಪ್ರ ಡಾಟ್ ಕಾಂ: ಮೂರನೇ ಭಾರಿಗೆ ಪರಿಷತ್ ಚುನಾವಣೆಗೆ ಸ್ವರ್ಧಿಸುತ್ತಿದ್ದೀರಿ. ಕೊನೆಯ ಹಂತ ತಯಾರಿ ಹೇಗೆ ನಡೆಯುತ್ತಿದೆ?
ಕೋಟ ಶ್ರೀನಿವಾಸ ಪೂಜಾರಿ: ದಕ್ಷಿಣಕನ್ನಡ ಪರಿಷತ್ ಕ್ಷೇತ್ರದಲ್ಲಿ ಎಲ್ಲಾ ಹದಿಮೂರು ವಿಧಾನಸಭಾ ಕ್ಷೇತ್ರದ ಪ್ರಥಮ ಹಂತದ ಪ್ರಚಾರ ಮುಗಿದು ಮನೆ ಮನೆ ಭೇಟಿ, ಕಾರ್ಯಕರ್ತರ ಭೇಟಿ ಆಗಿದೆ. ಹೊದಲ್ಲೆಲ್ಲಾ ಸಕಾರಾತ್ಮಕವಾದ ಸ್ಪಂದನೆ ದೊರೆಯುತ್ತಿದೆ. ಗ್ರಾಮ ಪಂಚಾಯತ್ ಸದಸ್ಯರಿಗೆ ಸಿಟ್ಟಿಂಗ್ ಫೀಸ್ ಇದ್ದದ್ದನ್ನು ಯಡಿಯೂರಪ್ಪನವರ ಅವಧಿಯಲ್ಲಿ ಗೌರವಧನ ನೀಡುವ ಸಂಪ್ರದಾಯ ಹುಟ್ಟುಹಾಕಿದ್ದನ್ನು ಹೊದಲ್ಲೆಲ್ಲಾ ಅಭಿಮಾನದಿಂದ ನೆನೆಯುತ್ತಿರುವುದು ಖುಷಿ ನೀಡಿದೆ.
ಕುಂದಾಪ್ರ ಡಾಟ್ ಕಾಂ: ಎಲ್ಲಾ ಸ್ತರದ ಪ್ರತಿನಿಧಿಯಾಗಿ ಗೆದ್ದವರು. ಪರಿಷತ್ ಸದಸ್ಯರಾಗಿದ್ದಾಗ ಪಂಚಾಯತ್ ರಾಜ್ಯ ವ್ಯವಸ್ಥೆಯೊಳಗಿನ ಸಮಸ್ಯೆಗಳನ್ನು ನಿವಾರಿಸಿದ ತೃಪ್ತಿ ಇದೆಯೇ?
ಕೋಟ: ಗ್ರಾಮ ಪಂಚಾಯತ್ ಅಸ್ತಿತ್ವಕ್ಕೆ ಕುತ್ತು ಬಂದಾಗ ಅದರ ವಿರುದ್ಧ ಹೋರಾಟ ಮಾಡಿದ ದಾಖಲೆ ತನ್ನ ಹಿಂದಿದೆ. ನನ್ನ ಅವಧಿಯಲ್ಲಿ ಗ್ರಾ.ಪಂಗಳಿಗೆ ಆರ್ಥಿಕ ಮತ್ತು ಅಧಿಕಾರ ಶಕ್ತಿ ಬರಬೇಕು ಎಂಬ ಉದ್ದೇಶದಿಂದ ಪಂಚಾಯತ್‌ಗಳಿಗೆ ಪಿಡಿಓ ಕಾರ್ಯದರ್ಶಿ ಕಂಪ್ಯೂಟರ್ ಆಪರೇಟರ್ ನೇಮಕ ಆಗಿದೆ. ಗ್ರಾ.ಪಂ ಅನುದಾನ ಮೂರು ಲಕ್ಷದಿಂದ ಹತ್ತು ಲಕ್ಷಕ್ಕೆ ಏರಿಕೆಯಾಗಿದೆ. ತಾ.ಪಂಗೆ ಒಂದು ಕೋಟಿ, ಜಿ.ಪಂ ಅಧ್ಯಕ್ಷರಿಗೆ ಎರಡು ಕೋಟಿ ವಿವೇಚನಾ ಅನುದಾನ, ನಗರಸಭೆಗೆ 25ಕೋಟಿ, ಪಟ್ಟಣ ಪಂಚಾಯತ್‌ಗೆ ಐದು ಕೋಟಿ ಅನುದಾನ ದೊರೆಯುವಂತಾದದ್ದು ನಗರಾಡಳಿತದಲ್ಲಿ ಸಂಚಲನ ಮೂಡಿಸಿತ್ತು. ಗ್ರಾಮ ಸುವರ್ಣ ಗ್ರಾಮ ಯೋಜನೆ. ಗ್ರಾಮ ಪಂಚಾಯತ್ ಸದಸ್ಯರಿಗೆ ಮೊದಲ ಭಾರಿಗೆ ಗೌರವಧನ, ಇವೆಲ್ಲವನ್ನು ಜನ ನೆನಪಿಟ್ಟುಕೊಂಡಿದ್ದಾರೆಂಬ ನಂಬಿಕೆ, ರಮೇಶ್‌ಕುಮಾರ್ ವರದಿ ಜಾರಿಗೆ ತರುವ ಬಗ್ಗೆ ಒಟ್ಟಾರೆ ಶಾಸಕನಾಗಿ ತನಗಾದ ಕೆಲಸವನ್ನು ಮಾಡಿದ್ದೇನೆಂಬ ವಿಶ್ವಾಸವಿದೆ.
ಕುಂದಾಪ್ರ ಡಾಟ್ ಕಾಂ: ಗ್ರಾ.ಪಂ ಸದಸ್ಯರ ಸದಸ್ಯತ್ವ ರದ್ಧತಿ ಕುರಿತ ವಿಧೇಯಕ ವಿರೋಧಿಸಿದ ಹೋರಾಟ ಹೇಗಿತ್ತು?
ಕೋಟ: ರಾಜ್ಯದಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮ ಸಭೆಗಳನ್ನು ನಡೆಸದ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರ ಸದಸ್ಯತ್ವವನ್ನೇ ರದ್ದುಪಡಿಸುವ ವಿದೇಯಕ ಬಂದಿತ್ತು. ಇದನ್ನು ವಿರೋಧಿಸಿ ವಿಪಕ್ಷ ನಾಯಕ ಜಗದೀಶ ಶೆಟ್ಟಿರ್ ಸಭಾತ್ಯಾಗ ಮಾಡಿದ್ದರು. ಈ ವಿಧೇಯಕ ಅನುಷ್ಠಾನಕ್ಕೆ ಬಂದರೆ ಅರ್ಧದಷ್ಟು ಸದಸ್ಯರ ಸದಸ್ಯತ್ವ ರದ್ದಾಗುತ್ತದೆ ಎಂದು ವಿಧಾನ ಪರಿಷತ್‌ಗೆ ವಿಧೇಯಕ ಬಂದಾಗ ಕರಾಳ ಶಾಸನ ಎಂದು ನಾನು ವಿರೋಧ ವ್ಯಕ್ತಪಡಿಸಿದ್ದೆ. ವಿಧೇಯಕ ವಿರೋಧಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಗ್ರಾ.ಪಂ ಸದಸ್ಯರು ಹೋರಾಟ ನಡೆಸಿದ್ದರು. ರೇಷನ್ ಕಾರ್ಡ್, ಕುಡಿಯುವ ನೀರು ಇತ್ಯಾದಿ ಸಮಸ್ಯೆಗಳಿಗಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ಬಳಿಕ ಸರಕಾರ ಶಾಸಕ ರಮೇಶ್ ಕುಮಾರ್ ಸೇತೃತ್ವದಲ್ಲಿ ಸಮಿತಿ ರಚಿಸಿತು. ರಮೇಶ್‌ಕುಮಾರ್ ವರದಿ ಅನುಷ್ಠಾನವಾದರೇ ಪಂಚಾಯತ್ ವ್ಯವಸ್ಥೆಗಳು ಒಂದಿಷ್ಟು ಬಲಗೊಳ್ಳಲಿದೆ.
ಕುಂದಾಪ್ರ ಡಾಟ್ ಕಾಂ: ಬಿಜೆಪಿ ಬೆಂಬಲಿತ ಮತಗಳಿಂದ ನಿರಾಯಾಸವಾಗಿ ಗೆಲ್ಲುಬಹುದೇ?
ಕೋಟ: ದಕ್ಷಿಣಕನ್ನಡ-ಉಡುಪಿ ಕ್ಷೇತ್ರದ ಒಟ್ಟು ಮತದಾರರ ಪೈಕಿ ಬಿಜೆಪಿ ಬೆಂಬಲಿತ 3480 ಸದಸ್ಯರಿದ್ದಾರೆ. ಬಹುತೇಕ ಸದಸ್ಯರು ಸಕ್ರಿಯ ಕಾರ್ಯಕರ್ತರಾಗಿರುವುದರಿಂದ ನನಗೆ ಗೆಲ್ಲುವ ವಿಶ್ವಾಸವಿದೆ. ವಿಧಾನ ಪರಿಷತ್ ಸದಸ್ಯರನಾಗಿದ್ದಾಗ, ಮುಜರಾಯಿ ಸಚಿವನಾಗಿದ್ದಾಗ ನಾನು ಮಾಡಿದ ಕಾರ್ಯಗಳನ್ನು ಮತದಾರರು ಮರೆತಿಲ್ಲ. ಪಕ್ಷದ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಹಾಗಾಗಿ ಗೆಲ್ಲುವ ವಿಶ್ವಾಸವಿದೆ.
ಕುಂದಾಪ್ರ ಡಾಟ್ ಕಾಂ: ಕಾಂಗ್ರೆಸ್ ಭಿನ್ನಮತ ಬಿಜೆಪಿಗೆ ಲಾಭವಾಗಿದೆಯೇ?
ಕೋಟ: ಕಾಂಗ್ರೆಸ್ ಭಿನ್ನಮತ ಕಾಂಗ್ರೆಸ್ ಹಾಗೂ ಬಂಡಾಯ ಅಭ್ಯರ್ಥಿಗಳಿಗೆ ತೊಡಕಾಗಬಹುದು. ಅದರಿಂದ ಬಿಜೆಪಿಗೆ ಲಾಭವಿಲ್ಲ. ಬಿಜೆಪಿಯ ಕಾರ್ಯಕರ್ತರ ಮೇಲೆಯೂ ಇದು ಪರಿಣಾಮ ಬೀರಲಾರದು. ನಮ್ಮ ನಿಷ್ಠಾವಂತ ಕಾರ್ಯಕರ್ತರು ಹಾಗೂ ತಾನು ಮಾಡಿದ ಕೆಲಸಗಳೇ ನನ್ನ ಲಾಭದ ಖಾತೆ ತೆರೆಯಲಿದೆಯೇ ಹೊರತು, ಇತರ ಪಕ್ಷಗಳ ಆಂತರಿಕ ತಿಕ್ಕಾಟಗಳಲ್ಲ.
ಕುಂದಾಪ್ರ ಡಾಟ್ ಕಾಂ: ಬಿಜೆಪಿ ದ್ವಿತೀಯ ಪ್ರಾಶಸ್ತ್ಯದ ಮತಗಳ ಹಾಕಬೇಡಿ ಎಂದಿದೆ. ಆದರೆ ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡಿದೆಯೇ?
ಕೋಟ: ರಾಜಕೀಯದಲ್ಲಿ ಹೇಗೆ ಬದಲಾವಣೆಗಳಾಗುತ್ತದೆಂದು ಹೇಳಲಾಗದು. ಆದರೆ ದಕ್ಷಿಣಕನ್ನಡ ಉಡುಪಿ ಕ್ಷೇತ್ರದಲ್ಲಿ ಪಕ್ಷದಿಂದ ಮೊದಲ ಪ್ರಾಶಸ್ತ್ಯದ ಮತಗಳನ್ನು ಮಾತ್ರವೇ ಹಾಕಿ ಎಂಬ ನಿರ್ದೇಶನವಿದೆ. ಹಾಗಾಗಿ ಒಳಒಪ್ಪಂದದ ಪ್ರಶ್ನೆ ಇಲ್ಲ. ಪಕ್ಷದ ನಿಲುವಿಗೆ ತಕ್ಕಂತೆ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. ಬಿಜೆಪಿಯ ಒಬ್ಬ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ಚಲಾಯಿಸಲಿದ್ದಾರೆ.
ಕುಂದಾಪ್ರ ಡಾಟ್ ಕಾಂ: ಈ ಭಾರಿ ಚುನಾವಣೆಯಲ್ಲಿ ಗೆದ್ದರೇ ಏನು ಮಾಡಬೇಕೆಂದುಕೊಂಡಿದ್ದೀರಿ?
ಕೋಟ: ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತನ್ನಿಂದಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ಗ್ರಾ.ಪಂ ಸದಸ್ಯರ ಮೇಲೆ ದೂರು ದಾಖಲಾದಾಗ ಡಿವೈಎಸ್ಪಿ ಶ್ರೇಣಿಯ ಪೊಲೀಸ್ ಅಧಿಕಾರಿ ತನಿಕೆ ನಡೆಸುವಂತಾಗಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಸರಕಾರಿ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರೇ ವಹಿಸುವಂತಾಗಬೇಕು. ಇವುಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.