ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದ ರೈತರ ಹಿತರಕ್ಷಣೆ ಹಾಗೂ ಕೃಷಿ ಭೂಮಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಸೋಮವಾರ ಬೆಂಗಳೂರಿನಲ್ಲಿ ಮಾನ್ಯ ಜಲಸಂಪನ್ಮೂಲ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ರಾಜಕೀಯ ದುರುದ್ದೇಶ ಹಾಗೂ ತಪ್ಪು ಮಾಹಿತಿಯಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿರುವ ಬೈಂದೂರಿನ ಸಿದ್ಧಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಈ ಹಿಂದೆ ಅನುಮೋದನೆಯಾದ ರೀತಿಯಲ್ಲಿಯೇ ತಕ್ಷಣವೇ ಮುಂದುವರಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಸಂಸದರು ಸಚಿವರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈಗಾಗಲೇ ಶೇ. 56% ರಷ್ಟು ಕಾಮಗಾರಿ ಪೂರ್ಣಗೊಂಡಿರುವ ಸಿದ್ಧಾಪುರ ಏತ ನೀರಾವರಿ ಯೋಜನೆಯು ತಜ್ಞರ ತಂಡದ ವರದಿಯ ಆಧಾರದ ಮೇಲೆಯೇ ಅನುಮೋದನೆಗೊಂಡು ಕಾರ್ಯಾರಂಭವಾಗಿತ್ತು ಎಂದು ಬಿ.ವೈ.ರಾಘವೇಂದ್ರ ಅವರು ಸಚಿವರಿಗೆ ವಿವರಿಸಿದರು. ವರಾಹಿ ನದಿಯಲ್ಲಿ ಸದ್ಯ 3,000 ಕ್ಯೂಸೆಕ್ಸ್ ನೀರಿನ ಹರಿವಿದ್ದು, ಈ ಯೋಜನೆಗೆ ಕೇವಲ 66 ಕ್ಯೂಸೆಕ್ಸ್ ನೀರು ಮಾತ್ರ ಆವಶ್ಯಕತೆಯಿದೆ. ಇದರಿಂದ ಇತರ ಯಾವುದೇ ಯೋಜನೆಗಳಿಗೆ ತೊಂದರೆಯಾಗದಿದ್ದರೂ, ಖಾಸಗಿ ಕಿರು ಜಲವಿದ್ಯುತ್ ಘಟಕದ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ತಪ್ಪು ಮಾಹಿತಿ ನೀಡಿ ಕಾಮಗಾರಿಗೆ ತಡೆ ತರಲಾಗಿದೆ ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಆದೇಶದ ಬಗ್ಗೆ ಸಚೀವರ ಗಮನ ಸೆಳೆದ ಸಂಸದರು:
ಈ ವಿಷಯವಾಗಿ ಇತ್ತೀಚೆಗಷ್ಟೇ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದಾಗ ಅವರು ಕಾಮಗಾರಿ ಪುನರಾರಂಭಿಸಲು ಆದೇಶಿಸಿರುವುದನ್ನು ಸಚಿವರ ಗಮನಕ್ಕೆ ತಂದ ಸಂಸದರು, ಕರಾವಳಿ ಭಾಗದ 7-8 ಗ್ರಾಮಗಳ ಸುಮಾರು 1,200 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಈ ಯೋಜನೆಯನ್ನು ರೈತರ ಹಿತದೃಷ್ಟಿಯಿಂದ ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು. ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವ ರಾಮಲಿಂಗಾರೆಡ್ಡಿ ಅವರು, ಈ ಕುರಿತು ಪರಿಶೀಲಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

















