ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಣೂರು ಗೀತಾನಂದ ಫೌಂಡೇಶನ್ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮತ್ತು ಸಮೃದ್ಧಿ ಇಕೋ ಕ್ಲಬ್ ವತಿಯಿಂದ ಕೃಷಿಯ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ಸಂಭ್ರಮದ ಸಾಗುವಳಿ ಕಾರ್ಯಕ್ರಮ ಶನಿವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಕೃಷಿಯು ನಮ್ಮ ದೇಶದ ಬೆನ್ನೆಲುಬಾಗಿದ್ದು, ಯುವಜನತೆ ಕೃಷಿಯೊಂದಿಗೆ ಬೆಸೆದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಹಿಂದಿನ ಮತ್ತು ಇಂದಿನ ಕೃಷಿಯಲ್ಲಿನ ಬದಲಾವಣೆಯನ್ನು ತುಲನಾತ್ಮಕವಾಗಿ ಪರಿಚಯಿಸಿದರು. ಪ್ರಕೃತಿಯೊಂದಿಗೆ ಹೊಂದಾಣಿಕೆ ಸಾಧಿಸಿ ಆಹಾರ ಉತ್ಪಾದನೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಸರ್ಕಾರಿ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ರಾಮದಾಸ್ ನಾಯಕ್ ಅವರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಕೃಷಿಯಂತಹ ಜೀವನ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಯುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜನತಾ ಫಿಶ್ ಮೀಲ್ & ಆಯಿಲ್ ಪ್ರಾಡಕ್ಟ್ಸ್‌ನ ಎಜಿಎಂ ಶ್ರೀನಿವಾಸ್ ಕುಂದರ್ ಹಾಗೂ ಫ್ಯಾಕ್ಟರಿ ಮ್ಯಾನೇಜರ್ ಮಿಥುನ್ ಕುಮಾರ್ ಅವರು ಸಹ ಭಾಗವಹಿಸಿ, ಕೃಷಿಯ ಮಹತ್ವ, ರೈತರ ಶ್ರಮ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಗೀತಾನಂದ ಫೌಂಡೇಶನ್ ಸಂಯೋಜಕರಾದ ರವಿಕಿರಣ್ ಕೋಟ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭತ್ತದ ನಾಟಿಯಲ್ಲಿ ಪಾಲ್ಗೊಂಡು ಕೃಷಿ ಚಟುವಟಿಕೆಗಳ ನೈಜ ಅನುಭವ ಪಡೆದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ, ರೈತರ ಪರಿಶ್ರಮದ ಅರಿವು ಹಾಗೂ ಪರಿಸರದ ಬಗ್ಗೆ ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಗೀತಾನಂದ ಫೌಂಡೇಶನ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

















