ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಯುವ బంಟರ ಸಂಘ ರಿ., ಕುಂದಾಪುರ ಇದರ 2026-26ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಡಾ. ಚೇತನ್ ಶೆಟ್ಟಿ ಕೋವಾಡಿ ಆಯ್ಕೆಯಾಗಿದ್ದಾರೆ.
ಜೂನ್ 27ರಂದು ಕುಂದಾಪುರದ ಆರ್. ಎನ್ ಶೆಟ್ಟಿ ಸಭಾಭವನದಲ್ಲಿ ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪ್ರಸ್ತುತ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರಾಗಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಅವರು ಕಾಲೇಜಿನ ರಾಷ್ಟ್ರೀಯ ಯೋಜನೆಯ ಸೇವಾ ಸಂಯೋಜನಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಖರ’ ಅವರ ಸಂಪಾದಕತ್ವದ ಅವಧಿಯಲ್ಲಿ ಸತತ ಮೂರು ವರ್ಷಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಕರ್ನಾಟಕ ಕರಾವಳಿಯ ಪ್ರಾದೇಶಿಕ ಸಂಸ್ಕೃತಿ ಎಂಬ ವಿಷಯದ ಕುರಿತು ಹಿರಿಯ ಸಂಶೋಧಕ ಡಾ. ನರೇಂದ್ರ ರೈ ದೇರ್ಲ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಸಂಘದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಸರ್ಕಾರಿ ಪ್ರೌಢಶಾಲೆ, ಹೈಕಾಡಿ ಇಲ್ಲಿನ ಶಿಕ್ಷಕ ಪ್ರವೀಣ್ ಶೆಟ್ಟಿ ಹರ್ಕೂರು ಮತ್ತು ಕೋಶಾಧಿಕಾರಿಯಾಗಿ ಎಂ. ಭಾಸ್ಕರ ಪೈ ಸರ್ಕಾರಿ ಪ್ರೌಢ ಶಾಲೆ, ಗುಜ್ಜಾಡಿ ಇಲ್ಲಿನ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ ಎಂಬುದಾಗಿ ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ ಬಸೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















