ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮಾಹಿತಿ ಕಾರ್ಯಗಾರಗಳು ಸೋಮವಾರ ನಡೆದವು.
ಕೆದೂರು, ಬಸ್ರೂರು, ಬಳ್ಕೂರು, ಕೋಣಿ, ಆನಗಳ್ಳಿ ಹಾಗೂ ಕುಂದಾಪುರ ನಗರದ ಬಿಜೆಪಿ ಕಚೇರಿಯಲ್ಲಿ ಈ ಕಾರ್ಯಗಾರಗಳನ್ನು ಆಯೋಜಿಸಲಾಗಿತ್ತು.

ಕುಂದಾಪುರ ನಗರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು, “ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಮೂಲ ಆಧಾರ. ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರು ಕೂಡ ಕೈಬಿಡಬಾರದು. ಬಿ.ಎಲ್.ಎ-2 ಕಾರ್ಯಕರ್ತರು ಮನೆ ಮನೆಗೆ ತೆರಳಿ ನಿಖರ ಮಾಹಿತಿ ಸಂಗ್ರಹಿಸಬೇಕು” ಎಂದು ಕರೆ ನೀಡಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ರಾದ ಸುರೇಶ್ ಶೆಟ್ಟಿ ಗೋಪಾಡಿ ಮಾತನಾಡಿ, “ಈ ಪರಿಷ್ಕರಣೆ ಕಾರ್ಯವನ್ನು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಅಚ್ಚುಕಟ್ಟಾಗಿ ಮಾಡಬೇಕು. ಯುವ ಮತದಾರರ ನೋಂದಣಿಗೆ ಹೆಚ್ಚಿನ ಒತ್ತು ನೀಡೋಣ” ಎಂದರು.
ಎಸ್‌ಐಆರ್ ಕುಂದಾಪುರ ಮಂಡಲ ಪ್ರಭಾರಿ ಶ್ಯಾಮಲ ಕುಂದರ್ ಅವರು ಮಾರ್ಗದರ್ಶನ ನೀಡಿ, “ಹೊಸ ಮತದಾರರ ಸೇರ್ಪಡೆ, ವಿಳಾಸ ಬದಲಾವಣೆ, ತಿದ್ದುಪಡಿ ಹಾಗೂ ಮರಣ ಹೊಂದಿದವರ ಹೆಸರು ತೆಗೆದುಹಾಕುವ ಪ್ರಕ್ರಿಯೆಯನ್ನು ಫಾರ್ಮ್ 6, 7, 8 ಮೂಲಕ ಹೇಗೆ ಮಾಡಬೇಕು ಎಂಬುದನ್ನು ಕಾರ್ಯಕರ್ತರಿಗೆ ವಿವರಿಸಿದರು. ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಿ” ಎಂದು ಸೂಚಿಸಿದರು.
ಮಂಡಲ ನಿಕಟ ಪೂರ್ವ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್., ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಬಿ.ಎಲ್.ಎ-1 ಕುಂದಾಪುರ ಸಂಚಾಲಕ ರಾಜೇಶ್ ಶೆಟ್ಟಿ, ಮಂಡಲ ಉಪಾಧ್ಯಕ್ಷ ಸುನೀಲ್ ಶೆಟ್ಟಿ ಹೇರಿಕುದ್ರು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಭಾಸ್ಕರ್ ಬಿಲ್ಲವ, ರಾಜೇಶ್ ಕಾವೇರಿ, ಪುರಸಭಾ ಮಾಜಿ ಸದಸ್ಯರು ಹಾಗೂ ಪಕ್ಷದ ವಿವಿಧ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

















