ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿ.ಎ. ಇಂಟರ್ ಮೀಡಿಯಟ್ ಮೇ. 2026ರ ಪರೀಕ್ಷೆಯಲ್ಲಿ ಕುಂಭಾಶಿಯ ಸುರೇಶ್ ಎಸ್.ಎ. ಮತ್ತು ಪುಷ್ಪ ದಂಪತಿಗಳ ಪುತ್ರ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಕ್ತನ ವಿದ್ಯಾರ್ಥಿ ಪನ್ನಗ ಅವರು ಗ್ರೂಪ್–2ರಲ್ಲಿ ಯಶಸ್ಸು ಸಾಧಿಸುವ ಮೂಲಕ, ಈಗಾಗಲೇ ಉತ್ತೀರ್ಣರಾಗಿದ್ದ ಗ್ರೂಪ್–1 ಜೊತೆಗೆ ಸಿ.ಎ. ಇಂಟರ್ ಮೀಡಿಯಟ್‌ನ ಎರಡೂ ಗ್ರೂಪ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅವರ ಈ ಸಾಧನೆಯು ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಸವಾಲಿನ ವೃತ್ತಿಪರ ಪರೀಕ್ಷೆಗಳಲ್ಲಿ ಒಂದಾದ ಸಿ.ಎ. ಪರೀಕ್ಷೆಯಲ್ಲಿ ಈ ಸಾಧನೆ ಮಾಡಿರುವುದು ಪನ್ನಗ ಅವರ ನಿರಂತರ ಪರಿಶ್ರಮ, ಶಿಸ್ತು, ಸಮರ್ಪಣೆ ಹಾಗೂ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಅವರ ಈ ಯಶಸ್ಸು ವಾಣಿಜ್ಯ ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಶಿಕ್ಷಣವನ್ನು ಆಯ್ಕೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ಪನ್ನಗ ಅವರ ಈ ಗಮನಾರ್ಹ ಸಾಧನೆಗಾಗಿ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಅವರು ಮುಂದಿನ ಸಿ.ಎ. ಫೈನಲ್ ಹಂತದಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿ ಉಜ್ವಲ ವೃತ್ತಿಜೀವನವನ್ನು ರೂಪಿಸಲಿ ಎಂದು ಶುಭ ಹಾರೈಸಿದ್ದಾರೆ.











