ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜು.01: ಮುಂಗಾರು ಮಳೆ ಆರಂಭದಲ್ಲಿ ಕ್ಷೀಣಗೊಂಡಿದ್ದರೂ, ಕಳೆದೆರಡು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಚೇತರಿಕೆ ಕಾಣತೊಡಗಿದೆ. ಜುಲೈ 02 ಹಾಗೂ 03ರಂದು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ವರದಿಯಂತೆ ಜುಲೈ 8ರ ತನಕ ರೆಡ್ ಅಲರ್ಟ್ ಹಾಗೂ ಆರೆಂಜ್ ಅಲರ್ಟ್ ಇದೆ.
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಸರಾಸರಿ 75.5ಮಿ.ಮೀ ಮಳೆಯಾಗಿದ್ದು, ಈ ಪೈಕಿ ಕುಂದಾಪುರ ತಾಲೂಕಿನಲ್ಲಿ 68.7ಮಿ.ಮೀ, ಬೈಂದೂರು ತಾಲೂಕಿನಲ್ಲಿ 75.5 ಮಿ.ಮೀ., ಬ್ರಹ್ಮಾವರ ತಾಲೂಕಿನಲ್ಲಿ 71.0ಮೀ.ಮೀ, ಹೆಬ್ರಿ ತಾಲೂಕಿನಲ್ಲಿ 57.7 ಮಿ.ಮೀ. ಮಳೆಯಾಗಿದೆ.
ನಿರಂತರ ಮಳೆಯಾದರೆ ನದಿ, ತೋಡು, ಕೆರೆ ಪಾತ್ರಗಳು ತುಂಬಿ ಹರಿಯಲಿದ್ದು, ಕಾಲುಸಂಕ, ಶಿಥಿಲ ಸೇತುವೆಯನ್ನು ಅವಲಂಬಿಸಿರುವ ಜನರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಿದೆ. ಮರವಂತೆ ಸೇರಿದಂತೆ ಕಡಲ ತೀರ ಭಾಗದಲ್ಲಿ ತೆರೆಗಳ ಅಬ್ಬರ ಹೆಚ್ಚಿದ್ದು, ತೀರ ವಾಸಿಗಳು ಎಚ್ಚರದಿಂದಿರುವುದು ಅಗತ್ಯವಾಗಿದೆ. ಗುಡ್ಡದ ತಪ್ಪಲಿನ ಪ್ರದೇಶದ ಜನರೂ ಗುಡ್ಡ ಜರಿತದ ಬಗ್ಗೆ ಹಾಗೂ ಅಪಾಯಕಾರಿ ಪ್ರದೇಶದಲ್ಲಿ ಆಸರೆ ಪಡೆಯುವ ಸಂದರ್ಭ ಜನರು ಸೂಕ್ತ ಎಚ್ಚರಿಕೆ ವಹಿಸಬೇಕಿದೆ.











