ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: “ಲೋಕ ದೃಷ್ಟಿ ಸಾಹಿತ್ಯದ ಮೂಲ ಸೆಲೆ. ಜೀವನಾನುಭವದಿಂದ ಲೋಕದೃಷ್ಟಿಯನ್ನು ಸಾಧ್ಯವಾಗಿಸಿಕೊಳ್ಳಬಹುದು. ಭಾಷೆ ಎಂಬುದು ಸಮೂಹದಿಂದ ಸಿದ್ಧಿಯಾಗುತ್ತದೆ. ಬದುಕನ್ನು ಪ್ರತಿಫಲಿಸಿದಾಗ ಯಾವುದೇ ಸಾಹಿತ್ಯವು ಮೌಲ್ಯಯುತವಾಗುತ್ತದೆ. ಹೆಚ್ಚಿನ ಓದು ನಮ್ಮ ಮನಸ್ಸುಗಳನ್ನು ಅರಳಿಸುತ್ತದೆ. ಕಲ್ಪನೆಗಳನ್ನು ಗರಿಗೆದರಿಸಿಕೊಂಡಾಗ ಸಾಹಿತ್ಯ ರಚನೆ ಸಾಧ್ಯ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರೂಪಿಸಿಕೊಳ್ಳುವುದಕ್ಕೆ ಬರವಣಿಗೆ ಸಶಕ್ತ ಮಾಧ್ಯಮವಾಗಿದೆ” ಎಂದು ಸಾಂಸ್ಕೃತಿಕ ಚಿಂತಕ ತಿಮ್ಮಪ್ಪ ಗುಲ್ವಾಡಿ ಹೇಳಿದರು.

ಅವರು ಬುಧವಾರ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸಂಚಿಕೆ ‘ದೃಷ್ಟಿ’ ಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ, ಕಾಲೇಜಿನ ಕಾರ್ಯದರ್ಶಿ ಎನ್. ಸದಾಶಿವ ನಾಯಕ್, ಸಂಪಾದಕ ಮಂಡಳಿಯ ಸದಸ್ಯ ನಾರಾಯಣ ಇ. ನಾಯ್ಕ್, ವಿದ್ಯಾರ್ಥಿನಿ ತನಿಷಾ ಉಪಸ್ಥಿತರಿದ್ದರು.
ನಿರ್ವಾಹಕ ಸಂಪಾದಕ ಎಚ್. ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಭೂಮಿಕ ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಸುಪ್ರೀತ ಆಚಾರ್ಯ ನಿರ್ವಹಿಸಿದರು.

















