ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೋಟರಿ ಕ್ಲಬ್ ಬೈಂದೂರು 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಇಲ್ಲಿನ ರೋಟರಿ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾದ ಅರುಣ್ ಕುಮಾರ್ ಶಿರೂರು, ಕಾರ್ಯದರ್ಶಿಯಾಗಿ ಮಣಿಕಂಠ ದೇವಾಡಿಗ ಅಧಿಕಾರ ಸ್ವೀಕರಿಸಿದರು.

ಪೂರ್ವ ಅಸಿಸ್ಟೆಂಟ್ ಗವರ್ನರ್, ಕುಂದಾಪುರ ಚಿನ್ಮಯಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್ ಪದಪ್ರಧಾನ ಕಾರ್ಯಕ್ರಮ ನೆರವೇರಿಸಿ ಬಳಿಕ ಮಾತನಾಡಿ, ರೋಟರಿ ಸ್ವಸ್ಥ ಸಮಾಜ ನಿರ್ಮಾಣದ ಧ್ಯೇಯ ಹೊಂದಿದ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. ಇದರ ಮೂಲಕ ಜಗತ್ತಿನಾದ್ಯಂತ ಅತ್ಯುನ್ನತ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ರೋಟರಿ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಶ್ರೀನಾಥ ರಾವ್, ವಲಯ ಸೇನಾನಿ ಪ್ರಶಾಂತ ಹವಾಲ್ದಾರ್, ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ, ನಿಕಟಪೂರ್ವ ಕಾರ್ಯದರ್ಶಿ ಪ್ರದೀಪ ಕುಮಾರ್ ಶೆಟ್ಟಿ ಕಾರಿಕಟ್ಟೆ, ಉಪಸ್ಥಿತರಿದ್ದರು.
ಈ ವೇಳೆ ಬೈಂದೂರು ಭಾಗದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಆಶಕ್ತ ವಿದ್ಯಾರ್ಥಿಗಳಿಗೆ ನೆರವು ನೀಡಲಾಯಿತು ಹಾಗೂ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಲಿ ಕುರ್ಚಿ ಹಸ್ತಾಂತರಿಸಲಾಯಿತು.
ಬೈಂದೂರು ರೋಟರಿ ಉಪಾಧ್ಯಕ್ಷ ಆನಂದ ಮದ್ಯೋಡಿ ಹಾಗೂ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಣಿಕಂಠ ದೇವಾಡಿಗ ವಂದಿಸಿದರು.
















