ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ಗೆಳೆಯರು, ಹೆತ್ತವರು ಹಾಗೂ ಗುರುಗಳ ಬಗ್ಗೆ ಸಕಾರಾತ್ಮಕ ಧೋರಣೆಯನ್ನು ಬೆಳೆಸಿಕೊಳ್ಳಬೇಕು. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜಾತಿ, ಮತ, ಧರ್ಮದ ಎಲ್ಲೆಯನ್ನು ಮೀರಿ ವಿಶ್ವಾತ್ಮಕ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಬಸ್ರೂರಿನ ಶ್ರೀ ಶಾರದಾ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಮ್. ದಿನೇಶ್ ಹೆಗ್ಡೆ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಘಟಕ 2026- 27ನೇ ಶೈಕ್ಷಣಿಕ ಸಾಲಿಗೆ ಕಾಲೇಜಿನ ಪ್ರಥಮ ವರ್ಷದ ಪದವಿಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ “ಪ್ರೇರಣಾ” ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪದವಿ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಯಾವುದೇ ಜ್ಞಾನ ಶಿಸ್ತನ್ನು ಆಯ್ಕೆ ಮಾಡಿಕೊಂಡರೂ, ನಿರಂತರ ಪರಿಶ್ರಮ ಪಟ್ಟರೆ ಯಶಸ್ಸು ಗಳಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಸಂಸ್ಥೆಯ ಭಿನ್ನ ಶೈಕ್ಷಣಿಕ ಆಯಾಮಗಳ ಕುರಿತು ತಿಳಿಸಿದರು.
ಕಾಲೇಜಿನ ಶೈಕ್ಷಣಿಕ ನಿಕಾಯಕ ತಿಮ್ಮಪ್ಪ ಡಿ.ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮನೀಷಾ ಪ್ರಾರ್ಥಿಸಿದರು. ಆಡಳಿತ ನಿಕಾಯಕ ರಕ್ಷಿತ್ ರಾವ್ ಗುಜ್ಜಾಡಿ ಪ್ರಸ್ತಾವಿಸಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರೀಶ್ ಕಾಂಚನ್ ಅತಿಥಿಗಳನ್ನು ಪರಿಚಯಿಸಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಕನ್ನಡ ಸಹಾಯಕ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಐಕ್ಯೂಎಸಿ ದೀಪಿಕಾ ಜಿ. ವಂದಿಸಿದರು.
















