ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಕನಿಷ್ಠ ಅಂಕಗಳನ್ನು ಪಡೆಯುವ ಸಾಧಾರಣ ಬುದ್ಧಿಮತ್ತೆಯ ವಿದ್ಯಾರ್ಥಿಗಳಿಗೂ ಉತ್ಕ್ರಷ್ಟ ದರ್ಜೆಯಲ್ಲಿ ಪಾಸಾಗುವಂತೆ ಮಾಡುವ ಕಲಿಕಾ ವ್ಯವಸ್ಥೆ ಈ ವಿದ್ಯಾಸಂಸ್ಥೆಯಲ್ಲಿರುವುದು ಸಂತಸದ ವಿಚಾರ ಎಂದು ಕಂಬದಕೋಣೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾದ ವಿಶ್ವನಾಥ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಕುಂದಾಪುರದ ಆರ್. ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ 2025-26ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಯಲ್ಲಿ ಉತ್ಕ್ರಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದಿಸುವ ‘ಪ್ರತಿಭಾ ಪುರಸ್ಕಾರ ‘ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜನ ನಾಯಕರ ಕೆಲವು ಮೌಲ್ಯಯುತ ಗುಣಗಳಿಂದ ಪ್ರೇರಣೆ ಪಡೆದು, ಜೀವನದಲ್ಲಿ ಬೇರೆಯವರ ಅಳುವಿಗೆ ಕಾರಣವಾಗದೇ, ಎಲ್ಲರ ನಗುವಿಗೆ ಕಾರಣವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಿ ಎಂದರು.
ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ನವೀನ್ ಕುಮಾರ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಉಪನ್ಯಾಸಕರಾದ ವನಿತಾ ಜೆ. ಶೆಟ್ಟಿ, ಸಂದೀಪ್ ಪೂಜಾರಿ, ಅಕ್ಷತಾ ಶೆಟ್ಟಿ, ಈಶ್ವರ್, ದೀಪಾ ಶೆಟ್ಟಿ ಹಾಗೂ ರವಿಕುಮಾರ್ ಶೆಟ್ಟಿ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು.
ರ್ಯಾಂಕ್ ವಿಜೇತರಾದ ಕೃತಿ ದೇವಾಡಿಗ, ಸ್ನೇಹಾ ಹಾಗೂ ರಿಹಾನ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ವಿದ್ಯಾರ್ಥಿನಿಯರಾದ ಸಹನಾ, ಮೇಘನಾ , ದೀಕ್ಷಾ ಪ್ರಾರ್ಥನೆ ಹಾಡಿದರು. ಇಂಗ್ಲೀಷ್ ಉಪನ್ಯಾಸಕಿ ರೂಪಾ ಪಾಲೆಂಕರ್ ಧನ್ಯವಾದ ಸಲ್ಲಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
















