ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲಾ – ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳಲ್ಲಿ ಊರಿನ ಜೀವಂತಿಕೆ ಅಡಗಿದೆ. ಇಂತಹ ಚಟುವಟಿಕೆಗಳ ಮೂಲಕ ಊರು ಭಾಷೆಯ ಚಲನಶೀಲತೆ ಹೆಚ್ಚಿಸುವ ಕಾರ್ಯ ಶ್ಲಾಘನಾರ್ಹ ಎಂದು ಸಾಹಿತಿ, ವಾಗ್ಮಿ ಓಂ ಗಣೇಶ್ ಉಪ್ಪುಂದ ಹೇಳಿದರು.

ಅವರು ಉಪ್ಪುಂದದ ತಮ್ಮ ನಿವಾಸದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕುಂದಾಪ್ರ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಬೈಂದೂರು ಆಯೋಜನೆಯಲ್ಲಿ ಹಮ್ಮಿಕೊಂಡ ಮೂರನೇ ವರ್ಷದ “ಗಮ್ಮತ್ತ್” ಕಾರ್ಯಕ್ರಮದ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದರು. ಕಳೆದೆರಡು ವರ್ಷಗಳಿಂದ ಗಮ್ಮತ್ತ್ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಈ ಭಾರಿಯೂ ಇನ್ನಷ್ಟು ಯಶಸ್ಸು ಕಾಣುವಂತಾಗಲಿ ಎಂದು ಹಾರೈಸಿದರು.

ಬೈಂದೂರಿನ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಪ್ರಾಸ್ತಾವಿಕ ಮಾತನಾಡಿ, ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗಮ್ಮತ್ತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಗಸ್ಟ್ 23ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯ ತನಕ ಯಡ್ತರೆ ನೆಲ್ಯಾಡಿ ಬೈಲ್ ಹಾಗೂ ಜೆ.ಎನ್.ಆರ್ ಹಾಲ್ನಲ್ಲಿ ದಿನವಿಡಿ ಕಾರ್ಯಕ್ರಮಗಳು ಜರುಗಲಿದೆ. ಈ ಭಾರಿ ಇನ್ನಷ್ಟು ಕ್ರೀಡೆ, ಸಾಹಿತ್ತಿಕ ಕಾರ್ಯಕ್ರಮಗಳನ್ನು ಒಳಗೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಬೇಕಿದೆ ಎಂದರು.
ಪೋಸ್ಟರ್ ಅನಾವರಣಕ್ಕೂ ಪೂರ್ವದಲ್ಲಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಅರ್ಚಕರಾದ ಸಂದೇಶ್ ಭಟ್, ಯುವ ಮುಂದಾಳುಗಳಾದ ಶೇಖರ ಪೂಜಾರಿ ಉಪ್ಪುಂದ, ನಾಗರಾಜ ಖಾರ್ವಿ, ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ತಾಲೂಕು ಘಟಕ ಅಧ್ಯಕ್ಷ ಅರುಣ್ ಕುಮಾರ್ ಶಿರೂರು, ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಸಂಚಾಲಕ ಸುಬ್ರಹ್ಮಣ್ಯ ಜಿ. ಉಪ್ಪುಂದ, ಕಾರ್ಯದರ್ಶಿ ಸುನಿಲ್ ಹೆಚ್. ಜಿ., ಬೈಂದೂರು, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಕಿಶೋರ್ ಸಸಿಹಿತ್ಲು, ಜಯರಾಮ ಶೆಟ್ಟಿ ಉಪ್ಪುಂದ, ವೆಂಕಟರಮಣ ಮಯ್ಯಾಡಿ, ಪ್ರಶಾಂತ್ ಪಡುವರಿ ಮೊದಲಾದವರು ಉಪಸ್ಥಿತರಿದ್ದರು.
















