ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಸೆ.23: ತಾಲೂಕಿನ ಕೋಟೇಶ್ವರದ ಪ್ರಸಿದ್ಧ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೋಟೇಶ್ವರ ಸಮೀಪದ ಹೊದ್ರಾಳಿ ಕೊಳನಕಟ್ಟೆ ನಿವಾಸಿ ಮಹಾಬಲ ಆಚಾರ್ಯ ಅವರ ಪುತ್ರ ಪದ್ಮನಾಭ ಆಚಾರ್ಯ (37) ಆತ್ಮಹತ್ಯೆ ಮಾಡಿಕೊಂಡ ಯುವಕ.
ಕುಂದಾಪುರದ ಹೆಂಚಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪದ್ಮನಾಭ ಅವರು, ಕಳೆದ ನಾಲ್ಕು ತಿಂಗಳಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮಂಗಳವಾರ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಅವರು ರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ದೇವಸ್ಥಾನದ ಸಮೀಪ ಅವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಬಳಿಕ ಕೋಟಿತೀರ್ಥ ಪುಷ್ಕರಣಿಯ ಪೂರ್ವ ಭಾಗದ ಮೆಟ್ಟಿಲ ಮೇಲೆ ಅವರ ಚಪ್ಪಲಿ ಹಾಗೂ ಟೋಪಿ ಪತ್ತೆಯಾಗಿದ್ದರಿಂದ, ಅವರು ಕೆರೆಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು.
ಬುಧವಾರ ಬೆಳಿಗ್ಗೆಯಿಂದಲೇ ಕೆರೆಯಲ್ಲಿ ಶೋಧ ನಡೆಸಲಾಯಿತು. ನಿತ್ಯ ಕೆರೆಯಲ್ಲಿ ಈಜಾಡುವ ಸ್ಥಳೀಯರಾದ ಸುಧೀರ್ ಕುಮಾರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಹಾಗೂ ಸತ್ಯನಾರಾಯಣ ಮಂಜ ಮೊದಲಾದವರು ಬೋಟ್ ಸಹಾಯದಿಂದ ಶೋಧ ನಡೆಸಿದ್ದು, ಬೆಳಿಗ್ಗೆ 9 ಗಂಟೆಯ ವೇಳೆಗೆ ಮೃತದೇಹ ನೀರಿನಲ್ಲಿರುವುದು ಪತ್ತೆಯಾಯಿತು.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪ್ರಸಿದ್ದ ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಅವರ ತಂಡವು ಸ್ಥಳೀಯ ಈಜುಗಾರರ ನೆರವಿನಿಂದ ನೀರಿಗಿಳಿದು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
















