ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಡಂಬರದ ಬದುಕನ್ನು ಇಷ್ಟ ಪಡದ ಕಾರಂತರು ನೇರ ನಡೆ ನುಡಿಯ ವ್ಯಕ್ತಿತ್ವವನ್ನು ಹೊಂದಿದವರು. ಯಕ್ಷಗಾನದ ಕುರಿತು ಆಸಕ್ತಿಯನ್ನು ಹೊಂದಿದ ಅವರು ಯಕ್ಷಗಾನದ ಉಳಿವಿಗಾಗಿ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ. ಕಾರಂತರಂತಹ ಸಾಹಿತಿಯನ್ನು ಪಡೆದಿರುವುದು ನಾಡಿಗೆ ಹೆಮ್ಮೆ ತರುವಂತಹ ವಿಚಾರವಾಗಿದೆ ಎಂದು ಜಾನಪದ ವಿದ್ವಾಂಸ ಮತ್ತು ನಿವೃತ್ತ ಪ್ರಾಂಶುಪಾಲ ಕನರಾಡಿ ವಾದಿರಾಜ ಭಟ್ ಹೇಳಿದರು.
ಅವರು ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ರಂಗೋಲಿ ಕಲಾ ಪರಿಷತ್ ರಿ. ಸಹಯೋಗದಲ್ಲಿ ನಡೆದ ಮಕ್ಕಳಿಗಾಗಿ ಕಾರಂತರು-9 ಶಾಲಾ ವಿದ್ಯಾರ್ಥಿಗಳಿಗೆ ಕಾರಂತರ ಪರಿಚಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮಕ್ಕಳ ಬಗೆಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ಕಾರಂತರು ಮಕ್ಕಳ ಭೌತಿಕ ಬೆಳವಣಿಗೆಗಾಗಿ ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ. ಮಕ್ಕಳ ಕೌಶಲ್ಯಭಿವೃದ್ಧಿಗಾಗಿ ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಮಕ್ಕಳ ಸಂಪೂರ್ಣ ಪಾಲ್ಗೋಳ್ಳುವಿಕೆ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ, ಡಾ. ಶಿವರಾಮ ಕಾರಂತರು ನಮ್ಮ ನಾಡು ನುಡಿಗಾಗಿ ಅನೇಕ ಕೊಡುಗೆಯನ್ನು ನೀಡಿದ್ದಾರೆ. ರಂಗೋಲಿ ಕಲೆಯೊಂದಿಗೆ ಇಂದಿನ ಪೀಳಿಗೆಗೆ ಕಾರಂತರನ್ನು ಪರಿಚಯಿಸುವುದು ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ನಾಡಿನ ಏಳಿಗೆಗಾಗಿ ಶ್ರಮಿಸಿದ ಮಹನ್ ವ್ಯಕ್ತಿಗಳ ಆದರ್ಶವನ್ನು ಆಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಮಕ್ಕಳಿಗೆ ಸೃಜನಶೀಲ ಚಟುವಟಿಕೆ ಹಾಗೂ ಕಾರಂತರ ವ್ಯಕ್ತಿತ್ವವನ್ನು ಪರಿಚಯಿಸಿ ಆ ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಡಾ.ಶಿವರಾಮ ಕಾರಂತ ಟ್ರಸ್ಟ್ ವಿವಿಧ ಕಾರ್ಯಕ್ರಮವನ್ನು ಯೋಜಿಸುತ್ತಿದೆ ಎಂದರು. ವಲಯ ಮಟ್ಟ ಹಾಗೂ ಶಾಲಾ ಮಟ್ಟ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಕುಮಾರ್, ಶಾಲಾಭಿವೃದ್ಧಿ ಸಮಿತಿ, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವೆಂಕಟರಮಣ ಹೆಚ್, ರೋಟರಿ ಕ್ಲಬ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರುಣ್ ಕುಮಾರ್ ಶಿರೂರು, ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಡಾ. ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಂಗೋಲಿ ಕಲಾಪರಿಷತ್ತಿನ ಅಧ್ಯಕ್ಷೆ ಡಾ.ಭಾರತಿ ಮರವಂತೆ ಸ್ವಾಗತಿಸಿ, ಶಾಲೆಯ ಶಿಕ್ಷಕಿ ಶಶಿರೇಖಾ ನಿರೂಪಿಸಿ ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಣಪತಿ ಹೋಬಳಿದಾರ್ ವಂದಿಸಿದರು.

















