ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕೊಟ್ಟಿದ್ದರಿಂದ ಹಾಸ್ಟೆಲ್‌ನಲ್ಲಿರುವ ಐನೂರಕ್ಕೂ ಮಿಕ್ಕ ವಿದ್ಯಾರ್ಥಿಗಳು ಓದು, ಬರಹಕ್ಕೆ ತೊಂದರೆ ಆಗುತ್ತದೆ. ಯಕ್ಷಗಾನ ಪ್ರದರ್ಶನದಿಂದ ವಿದ್ಯಾರ್ಥಿಗಳು ನಿದ್ದೆಯಿಲ್ಲದೆ ರಾತ್ರಿ ಕಳೆಯುವ ಸ್ಥಿತಿ. ಪರಿಸರವೂ ಗಬ್ಬೆದ್ದು ಹೋಗುತ್ತಿದ್ದು, ಯಕ್ಷಗಾನ ಪ್ರದರ್ಶನಕ್ಕೆ ಬೇರೆ ಕಡೆ ಅವಕಾಶ ಮಾಡಿಕೊಡಿ.
ಕುಂದಾಪುರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಯಕ್ಷಗಾನ ಪ್ರದರ್ಶನದ ವಿರುದ್ಧ ತಾಗಿಬಿದ್ದರು. ವಿಷಯ ಪ್ರಸ್ತಾಪಿಸಿದ ಚಂದ್ರಶೇಖರ ಖಾರ್ವಿ, ಗಾಂಧಿ ಮೈದಾನ ಸುತ್ತಾಮುತ್ತಾ ಶಾಲೆ, ಹಾಸ್ಟೆಲ್ ಇದ್ದು, ರಾತ್ರಿ ನಡೆಯುವ ಯಕ್ಷಗಾನ ಪ್ರದರ್ಶನದಿಂದ ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ಬರುತ್ತಿದೆ. ಮಕ್ಕಳ ವಿದ್ಯಾಭ್ಯಾಸ ಕುಂಟಿತವಾಗುವ ಸಂಭವವಿದ್ದು, ಯಕ್ಷಗಾನ ಪ್ರದರ್ಶನ ಕೋಡಿಗೆ ಶಿಪ್ಟ್ ಮಾಡುವಂತೆ ಆಗ್ರಹಿಸಿದರು.
ಯಕ್ಷಗಾನ ಸಂಸ್ಕೃತಿ ಪ್ರತೀಕವಾಗಿದ್ದು, ಪರ್ಯಾಯ ವ್ಯವಸ್ಥೆಯಿಲ್ಲದೆ ಗಾಂಧಿ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ರದ್ದು ಮಾಡೋದ್ರಿಂದ ಕಲಾಪ್ರಕಾರಕ್ಕೆ ಹಿನ್ನೆಡೆಯಾಗಲಿದೆ. ಸೂಕ್ತ ಪರ್ಯಾಯ ವ್ಯವಸ್ಥೆ ಬಗ್ಗೆ ಸದಸ್ಯರು ಮಾಹಿತಿ ನೀಡಿದರೆ ಚಿಂತನೆ ಮಾಡಲಾಗುತ್ತದೆ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.
ಕುಂದಾಪುರ ಪುರಸಭೆ ಗ್ರಾಪಂ.ಗಳಿಗೆ ನೀರಿನ ಪೂರೈಕೆ ಮಾಡುತ್ತಿದ್ದು, ಗಾಪಂ. ನೀರಿನ ಕರ ಪಾವತಿಸಿಲ್ಲ. ಇದೂವರೆಗೆ ಎಷ್ಟು ನೀರಿನ ತೆರಿಗೆ ಬಾಕಿ ಇದೆ. ವಸೂಲಿಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸದಸ್ಯ ಸತೀಶ್ ಶೆಟ್ಟಿ ಪ್ರಶ್ನಿಸಿದರು. ಪುರಸಭೆ ಮತ್ತು ಗ್ರಾಪಂ.ನಿಂದ ಒಟ್ಟು ನೀರಿನ ಬಾಕಿ ೨೯,೩೯,೫೮೭ ಲಕ್ಷವಿದ್ದು, ನೀರಿನ ತೆರಿಗೆ ನೀಡದ ಗ್ರಾಪಂ.ಗಳಿಗೆ ಎರಡು ಬಾರಿ ನೊಟೀಸ್ ನೀಡಲಾಗಿದೆ. ಶೇ.೭೦ ರಿಂದ 80ರಷ್ಟು ನೀರಿನ ಬಾಕಿ ವಸೂಲಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಹೇಳಿದರು.
ಕುಂದಾಪುರ ಪುರಸಭೆಗೆ ಕಸ ವಿಲೇವಾರಿ ಮತ್ತು ತೆರಿಗೆ ಸಂದಾಯ ಮಾಡಿದವರ ದಾಖಲಾತಿ ಇಲ್ಲವಾ ಎಂದು ಪ್ರಶ್ನಿಸಿದ ಮೋಹನದಾಸ್ ಶೆಣೈ, ಪುಂದಾಪುರ ಪುರಸಭೆ ಆಧಿಕಾರಿಗಳು ಕಸ ಮತ್ತು ತೆರಿಗೆ ಕಟ್ಟಿದವರ ಅಂಗಡಿಗೂ ಹೋಗಿ ಬಾಕಿಯಿದೆಯಾ ಎಂದು ಪ್ರಶ್ನಿಸಿ ಕಿರಿಕಿರಿ ಮಾಡುತ್ತಾರೆ. ಪುರಸಭೆ ದಾಖಲೆ ಇಟ್ಟು ಹಣ ಕಟ್ಟದವರ ಬಳಿ ಸಿಬ್ಬಂದು ಕಳುಹಿಸಬೇಕು ಎಂದು ಒತ್ತಾಯಿಸಿದ್ದು, ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಖಾರ್ವಿಕೇರಿಯಲ್ಲಿ ನೀರು ಬರುತ್ತಿಲ್ಲ. ನೀರು ಪೂರೈಕೆ ಮಾಡುವಂತೆ ಚಂದ್ರಶೇಖರ ಖಾರ್ವಿ ಒತ್ತಾಯಕ್ಕೆ ಒತ್ತರಿಸಿದ ಮುಖ್ಯಾಧಿಕಾರಿ, ಹೊಸ ಪೈಪ್ ಲೈನ್ ಜೋಡಣೆಗೆ ಟೆಂಡರ್ ಆಗಿದ್ದು, ಸದದಲ್ಲೇ ಕಾಮಗಾರಿ ಆರಂಭವಾಗಲಿದೆ. ಪೈಪ್ ಲೈನ್ ನಂತರ ನೀರಿನ ಸಮಸ್ಯೆ ಪರಿಹಾರ ಆಗಲಿದೆ ಎಂದು ಹೇಳಿದರು. ಕೋಡಿ ಸೇತುವಗೆ ಸ್ಟ್ರೀಲೈಟ್, ಬಿಎಸ್‌ಎನ್‌ಎಲ್ ಕೇಬಲ್ ಜೋಡಣೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಸ್ಥಾಯಿ ಸಮಿತಿ ಸದಸ್ಯರ ಪಟ್ಟಿ ಅಂತಿಮಗೊಳಿಸಲಾಯಿತು.
ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್. ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗರಾಜ ಕಾಮದೇನು, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ನಾಯಕ್, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.