ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಸ್ಪೃಷ್ಯತೆ ದಿನದಲ್ಲೂ ಸಮಾನತೆ ಮಂತ್ರ ಭೋದಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮ್ಮಿಧಾನದ ಮೂಲಕ ಸಮಾಜದ ಕಟ್ಟಕಡೆಯ ಜನರಿಗೂ ಸಮಾಜಿಕ ನ್ಯಾಯ ನೀಡಿದರು. ಸಮ್ಮಿದಾ ದೇಶಕ್ಕೆ ನೀಡಿ ಮಾರ್ಗದರ್ಶನ ನೀಡಿದರು ….ಹೀಗೆಂದವರು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ.
ಕುಂದಾಪುರ ತಾಲೂಕ್ ಪಂಚಾಯತ್, ಕಂದಾಯ ಇಲಾಖೆ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕುಂದಾಪುರ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ವಿವಿಧ ಸೌಲತ್ತು ವಿತರಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ಕಾಲಘಟ್ಟದಲ್ಲಿ ಹಿಂದುಳಿದವರು, ದಲಿತರಿಗೆ ವೇದಿಕೆ ಹಾಕಿಕೊಟ್ಟ ಅಂಬೇಡ್ಕರ್ ಮೂಲ ಉದ್ದೇಶ ಹಿಂದುಳಿದವರೂ, ಸಮಾಜದ ಮುಖ್ಯವಾಹಿನಿ ಜೊತೆ ಬೆರೆಯುವ ಜೊತೆ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಆಗಿದೆ. ಅವರ ಮಾರ್ಗದಲ್ಲಿ ನಾವು ನಡೆಯುವ ಜೊತೆ ಅವರ ಆದರ್ಶ ಪಾಲಿಸುವುದೇ ನಾವು ಅವರಿಗೆ ಕೊಡುವ ನಿಜವಾದ ಗೌರವ ಎಂದು ಹೇಳಿದರು.
ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್. ಕಾರ‍್ಯಕ್ರಮ ಉದ್ಘಾಟಿಸಿದರು. ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ. ಹಿರಿಯಣ್ಣ, ಕುಂದಾಪುರ ಡಿಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ತಾಪಂ. ಇಒ ನಾರಾಯಣ ಸ್ವಾಮಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಪದವಿ ಕಾಲೇಜ್ ಸಹಪ್ರಾಧ್ಯಾಪಕ ಡಾ. ಜಯಪ್ರಕಾಶ್ ಶೆಟ್ಟಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಅಂತರ್ ಜಾತಿ ವಿವಾಹವಾದ ಜೋಡಿಗೆ ಧನಸಹಾಯ ಚೆಕ್ ಮತ್ತು ವಿವಿಧ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಕುಂದಾಪುರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಸ್. ಸಿದ್ದನ್ ಸ್ವಾಗತಿಸಿದರು. ಬಿಸಿಎಂ ಹಾಸ್ಟೆಲ್ ವಾರ್ಡನ್ ನರಸಿಂಹ ಪೂಜಾರಿ ನಿರೂಪಿಸಿದರು. ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ವಂದಿಸಿದರು.