ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನುಷ್ಯನ ದೇಹಾರೋಗ್ಯಕ್ಕೆ ಔಷಧಗಳಂತೆ ಮಾನಸಿಕ ಆರೋಗ್ಯಕ್ಕೆ ಧರ್ಮ, ಸಾಂಸ್ಕೃತಿಕ ಮನರಂಜನೆಗಳು ಅವಶ್ಯ. ಹಿಂದಿನಿಂದಲೂ ದೇವಾಲಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆರಾಧನೆಯ ರೂಪದಲ್ಲಿ ನಡೆಸಲಾಗುತ್ತಿತ್ತು. ಆದ್ದರಿಂದಲೇ ಯಕ್ಷಗಾನದಂತಹ ಕಲೆಗಳು ಉಳಿದು ಬೆಳೆಯಲು ಸಾಧ್ಯವಾಯಿತು-ಎಂದು ಉಡುಪಿ ಜಿಲ್ಲಾ ಕನ್ನಡ-ಸಂಸ್ಕೃತಿ ಇಲಾಖೆ ನಿರ್ದೇಶಕ ದೇವದಾಸ ಪೈ ಹೇಳಿದರು.
ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಾಲಯ ರಥಬೀದಿಯ ಸುಬ್ರಾಯ ಮಲ್ಯ ವೇದಿಕೆಯಲ್ಲಿ ನೂತನ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಮಂಡಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮಗಳಿಗಾಗಿ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ೩೩೦ ಕೋಟಿ ರೂ. ಮೀಸಲಿರಿಸಿದೆ. ವಾರ್ಷಿಕ 50 ಲಕ್ಷ ರೂ.ಗಳವರೆಗೆ ಪ್ರತಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಇಲಾಖೆ ಪ್ರಾಯೋಜನೆ ಒದಗಿಸುತ್ತದೆ. ಪ್ರತಿ ಜಿಲ್ಲೆಯಲ್ಲಿ ಸಂಸ್ಕೃತಿ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಬಯಲು ರಂಗಮಂದಿರಕ್ಕೆ ಒಂದು ಲಕ್ಷ ರೂ. ಪ್ರೋತ್ಸಾಹಧನ ಒದಗಿಸುತ್ತದೆ. ಪೌರಾಣಿಕ ನಾಟಕಗಳಿಗೆ 30 ಸಾವಿರ ರೂ. ಪ್ರೋತ್ಸಾಹಧನ ನೀಡಬಹುದಾಗಿದೆ. ಕಂಬಳ ಮಸ್ತಕಾಭಿಷೇಕ ಮೊದಲಾದ ಕಾರ್ಯಕ್ರಮಗಳಿಗೂ ಇಲಾಖೆ ಸಹಕಾರ ನೀಡುತ್ತದೆ. ನಮ್ಮ ಭಾಷೆ ಮತ್ತು ಸಂಸ್ಕೃತಿಯ ಸೊಗಸು, ಹಿರಿಮೆ ಜನರಿಗೆ ತಿಳಿಸಲು ಸರ್ಕಾರ ಇಲಾಖೆಯ ಮೂಲಕ ಶ್ರಮಿಸುತ್ತಿದೆ. ಯುವ ಜನರು ಇಂದು ಇವನ್ನೆಲ್ಲ ಮರೆತು ಇಂಟರ್‌ನೆಟ್ ಎಂಬ ಹುಸಿ ಪ್ರಪಂಚದಲ್ಲಿ ತೇಲಾಡುತ್ತಿದ್ದಾರೆ. ಆದರೆ ಅದರಿಂದ ಒಂದು ದಿನ ಭ್ರಮನಿರಸನವಾಗುವುದು ಖಚಿತ. ಆದ್ದರಿಂದ ಯುವಪೀಳಿಗೆ ಕಲೆ, ಸಂಸ್ಕೃತಿಗಳ ನಿಜ ಪ್ರಪಂಚದ ಅರಿವು ಮೂಡಿಸಿಕೊಳ್ಳಬೇಕು. ಯಕ್ಷಗಾನ ಮಂಡಳಿಗಳು ಈ ನಿಟ್ಟಿನಲ್ಲಿ ಕಾರ್ಯಾಚರಿಸಬೇಕು ಎಂದು ಅವರು ಕರೆ ನೀಡಿದರು.
ಜ್ಯೋತಿಷಿ ವೇದಮೂರ್ತಿ ತಲ್ಲೂರು ಪಾಂಡುರಂಗ ಭಟ್ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾದ ಉದ್ಯಮಿ ಶ್ರೀಧರ ಕಾಮತ್, ಪ್ರತಕರ್ತ ಕೆ.ಜಿ. ವೈದ್ಯ, ನವದೆಹಲಿಯ ಶ್ರೀ ಹರಿಗುರು ಸೇವಾ ಪ್ರತಿಷ್ಠಾನದ ಶ್ರೀನಿವಾಸ ಪ್ರಭು, ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಎಚ್. ದಿವಾಕರ ಶೆಟ್ಟಿ, ಉದ್ಯಮಿ ರಾಧಾಕೃಷ್ಣ ಸೇರಿಗಾರ್ ಶುಭ ಕೋರಿದರು.
ಪೇಟೆ ಶ್ರೀ ವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರ ರಾಧಾಕೃಷ್ಣ ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪೆರ್ಡೂರು ಮೇಳದ ಚಂಡೆವಾದಕ ರಾಕೇಶ ಮಲ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಭಾಗವತ ಕೆ.ಪಿ. ಹೆಗಡೆ ಪ್ರಾರ್ಥಿಸಿದರು. ಶ್ರೀ ಗಣೇಶ ಯಕ್ಷಗಾನ ಮಂಡಳಿಯ ನಿರ್ದೇಶಕ ವಿಠಲ ಕಾಮತ್ ಸ್ವಾಗತಿಸಿದರು. ಕರ್ನಾಟಕ ಆಯುರ್ವೇದ ಬೋರ್ಡ್ ಬೆಂಗಳೂರು ಇದರ ಸದಸ್ಯ ಡಾ| ಎಂ.ವಿ. ಹೊಳ್ಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪ್ಪಿನಕುದ್ರು ಶ್ರೀ ರಾಮ ಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನಿರ್ದೇಶಕ ಸೂರ್ಯನಾರಾಯಣ ಮಯ್ಯ ಅತಿಥಿಗಳನ್ನು ಗೌರವಿಸಿದರು. ಅಧ್ಯಾಪಕ ವಸಂತರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಉದ್ಘಾಟನಾ ಸಮಾರಂಭದ ನಂತರ ನೂತನ ಮಂಡಳಿಯ ಪ್ರಥಮ ಕಾರ್ಯಕ್ರಮವಾಗಿ ವೀರ ಬಭ್ರುವಾಹನ ಯಕ್ಷಗಾನ ಪ್ರದರ್ಶನ ನಡೆಯಿತು.