ಕಡುಗಲ್ಲ ಗುಹೆ, ಒಳಗೆ ಶ್ರೀ ಕೇಶವನಾಥ!
ಕುಂದಾಪ್ರ ಡಾಟ್ ಕಾಂ.
ಪ್ರಕೃತಿಯ ಒಡಲೊಳಗೆ ನೂರೆಂಟು ವಿಸ್ಮಯಗಳಿವೆ. ಅದು ವಿಜ್ಞಾನಕ್ಕೂ ಸವಾಲೇ. ಅಂತಹ ನೈಸರ್ಗಿಕ ವಿಸ್ಮಯ ಕುಂದಾಪುರ ತಾಲೂಕು ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೀರಾ ಕುಗ್ರಾಮ ಮೂಡುಗಲ್ಲು ಎಂಬಲ್ಲಿದೆ. ಹೌದು. ಇದೊಂದು ಪ್ರಾಕೃತಿಕ ವಿಸ್ಮಯ. ಸುಮಾರು 50 ಅಡಿಗಳಷ್ಟು ದೂರ ಕಡುಗಲ್ಲ ಗುಹೆ. ಅದರ ನಡುವೆ ಕುಳಿತಿರುವಾತ ಲಯಕರ್ತ ಶ್ರೀ ಕೇಶವನಾಥೇಶ್ವರ. ದಟ್ಟ ಕಾಡಿನ ನಡುವಿನ ಅಂಗೈಯಗಲ ಪುಟ್ಟ ಗ್ರಾಮದ ನಟ್ಟ ನಡುವೆ ಇದೆ ಈ ಕೇಶವನಾಥ ಕ್ಷೇತ್ರ.
[quote bgcolor=”#ffffff” arrow=”yes” align=”right”]ಡಿ.18 ಸೋಮವಾರ ನಡೆಯುವ ಎಳ್ಳಮಾವಾಸ್ಯೆ ಪ್ರಯುಕ್ತ ಮಹಾ ಅನ್ನಸಂತರ್ಪಣೆ , ಶ್ರೀಧರ್ ಶೆಟ್ಟಿ ಮೂಡಗಲ್ಲು ಮತ್ತು ದೀಕ್ಷಿತ್ ಶೆಟ್ಟಿ ಹೊಸೂರು ಇವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮತ್ತು ಕನ್ನಡ ಚಿತ್ರರಂಗದ ಭರವಸೆಯ ನಟ ಸೂಚನ ಶೆಟ್ಟಿ ಯವರಿಂದ ಡ್ಯಾನ್ಸ್, ಯಾರೇ ನೀನು ಸಾಂಗ್ ಖ್ಯಾತಿಯ ರವೀಂದ್ರ ಶ್ರೇಯಾನ್ ರವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಹಾಗೂ ಶ್ರೀ ಶನೇಶ್ವರ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಶಶಿಧರ ಮಿತ್ರವೃಂದ ಕೆರಾಡಿ ಮೂಡಗಲ್ಲು ಇದರ ಪದಾಧಿಕಾರಿಗಳು ತಿಳಿಸಿದ್ದಾರೆ.[/quote]
ಪೂರ್ವಾ ಭಾಗಕ್ಕೆ ಬೃಹತ್ ಕಡುಗಲ್ಲ ಬಂಡೆಗಳಿಗೆ ಚಾಚಿಕೊಂಡಂತೆ ಇರುವುದೇ ಈ ಗುಹಾಂತರ ದೇವಸ್ಥಾನ. ಅತ್ಯಂತ ಅನೂಹ್ಯವೂ, ಅನುಪಮವೂ, ವೈಶಿಷ್ಠ್ಯ ಪೂರ್ಣವೂ ಆಗಿರುವ ಕೆಂಪುಗಲ್ಲಿನ ಗುಹಾಂತರದಲ್ಲಿ 50 ಅಡಿ ನೀರಿನಲ್ಲಿಯೇ ಸಾಗಿದರೆ ಅತ್ಯಂತ ರಮಣೀಯವೂ, ತೇಜೋಪೂರ್ಣವೂ ಆದ ಕೇಶವನಾಥನ ಉದ್ಭವ ಮೂರ್ತಿ ಕಣ್ಮನಗಳ ತುಂಬಿಕೊಳ್ಳುತ್ತದೆ. ಯಾವ ಶಿಲ್ಪಿ ಕೆತ್ತಿದನೋ, ಅದ್ಯಾವ ಶಿಲೆಯ ಬಿಂಬವೋ..? ವ್ಹಾ! ಊಹನೆಗೂ ನಿಲುಕದ ವಿಸ್ಮಯವದು. ಯಾವುದೇ ಬೆಳಕಿನ ಶಕ್ತಿಯಿಲ್ಲದ, ವಿದ್ಯುತ್ ಶಕ್ತಿ ಈ ಪುಟ್ಟ ಗ್ರಾಮವನ್ನೇ ಪ್ರವೇಶ ಮಾಡದ ಈ ಸುರಂಗ ಮಾರ್ಗದ ಹೊರ ಭಾಗದಲ್ಲಿ ನಿಂತು ನೋಡಿದರೆ ದೂರದಲ್ಲಿರುವ ಪರಶಿವ ತೇಜಸ್ಸು ಮಿಂಚಿನೋಪಾದಿಯಲ್ಲಿ ಸೆಳೆಯುತ್ತದೆ. ಶತ ಶತಮಾನಗಳ ಪೂರ್ವದಲ್ಲಿಯ ಈ ಉದ್ಭವ ಲಿಂಗವೇ ಇಲ್ಲಿನ ಕುತೂಹಲ, ಆಕರ್ಷಣೆಯ ಕೇಂದ್ರ. (ಕುಂದಾಪ್ರ ಡಾಟ್ ಕಾಂ ಲೇಖನ)
ಏಳು ಅಡಿಯಷ್ಟು ಎತ್ತರದ ಈ ಸುರಂಗ ಹಲವಷ್ಟು ದೂರ ಇದೆಯಂತೆ. ಶಿವನ ವಿಗ್ರಹದ ಹಿಂದೆ ಯಾರೂ ಕೂಡಾ ಇನ್ನೂ ಹೋಗುವ ಧೈರ್ಯ ಮಾಡಿಲ್ಲ. ಅಂದರೆ ಗವ್ವೆನ್ನುವ ಕತ್ತಲು, ನೀರಿನ ಒರತೆ ಮಾತ್ರ ಕಾಣಸಿಗುತ್ತದೆ. ಒಂದು ಅಡಿ ನೀರಿನಲ್ಲಿಯೇ ಶಿವನ ಸಮೀಪ ಸಾಗಿ, ಭಜಿಸಿ, ಅರ್ಚಿಸಿ, ಪ್ರಾರ್ಥಿಸಲು ಸಾಕಷ್ಟು ಅವಕಾಶವಿದೆ. ಶಿವನ ಸನ್ನಿದಾನದಲ್ಲಿ ಸುಮಾರು 50ಜನ ನಿಂತು ದರ್ಶನ ಪಡೆಯುವಷ್ಟು ಸ್ಥಳವಕಾಶವಿದೆ. ಈ ಗುಹೆಯನ್ನು ಪ್ರವೇಶ ಮಾಡುವಾಗ ಸ್ವಲ್ಪ ಶಿರ ಬಗ್ಗಿಸಿಕೊಂಡು ಪ್ರವೇಶ ಮಾಡಿದರೂ ನಂತರ ಒಳ ಬಾಗದಲ್ಲಿ ಸುಮಾರು 6-7 ಅಡಿಯಷ್ಟು ಎತ್ತರ ಸ್ಥಳವಿದೆ. ಬೃಹತ್ ಕೆಂಪು ಕಲ್ಲ್ಲಿನ ಬಂಡೆಗಳು ಮೇಲೆ ಮುಚ್ಚಲ್ಪಟ್ಟಿವೆ. ಪ್ರಾಕೃತಿಕ ದತ್ತವಾಗಿ ಈ ರಚನೆಯಾಗಿದೆ.
ಸಮುದ್ರ ಮಟ್ಟಕ್ಕೆ ಸಮಾನಾಗಿ ಅತ್ಯಂತ ಎತ್ತರದ ಸ್ಥಳದಲ್ಲಿ ಕಗ್ಗಾಡಿನ ನಡುವೆ ಕಾಣುವ ಈ ಸ್ಥಳ ಜನಮಾನಸದಿಂದ ಬಹು ದೂರನೇ ಇದೆ. ಇಂತಹ ಒಂದು ಅದ್ಬುತವಾದ, ಸೃಷ್ಠಿದತ್ತವಾದ ಕ್ಷೇತ್ರವಿದೆ ಎನ್ನುವುದರ ಅರಿವು ಬಹುತೇಕರಿಗೆ ಗೊತ್ತಿಲ್ಲ. ದೇವಸ್ಥಾನವೆಂದರೆ ಶಿಲಾರಚನೆಗಳು, ಭಾರೀ ಶಿಖರ ಗೋಪುರಗಳು, ಬ್ರಹತ್ ಸಮುಚ್ಛಯಗಳ ಕಲ್ಪನೆ ಇರುವ ಜನರಿಗೆ ಇಂಥಹ ಭೂಗರ್ಭದೊಳಗೆ ನೆಲೆಸಿ, ವಿಸ್ಮಯ ಮೂಡಿಸುವ ಕೇಶವನಾಥನ ದರ್ಶನವಾಗಬೇಕಿದೆ. ಊರಿಗೆ ಊರೇ ಬೆಟ್ಟ ಗುಡ್ಡ, ಕೋಟೆ ಕೊತ್ತಲಬೀಡು. ಯಾವುದೇ ಮೂಲಭೂತ ಸೌಕರ್ಯವಿಲ್ಲದ ಈ ಪ್ರದೇಶದಲ್ಲಿ ಬಹು ಅಪರೂಪದ ಅನನ್ಯ ಕ್ಷೇತ್ರವೊಂದು ಸುಪ್ತವಾಗಿಯೇ ಉಳಿದಿದೆ. (ಕುಂದಾಪ್ರ ಡಾಟ್ ಕಾಂ ಲೇಖನ)
ಗುಹೆ ಪ್ರವೇಶ ಮಾಡಬೇಕಿದ್ದರೆ ದೇವಸ್ಥಾನದ ಒಳಹೋಗಲೇ ಬೇಕು
ಗುಹಾಂತರ ದೇವಾಲಯದ ಎದುರು ಪಾಶ್ರ್ಚದಲ್ಲಿ ದೇವಳ ಪ್ರಕಾರ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪರಿವಾರ ದೇವರುಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ಎಳ್ಳಮಾವಾಸ್ಯೆಯ ದಿನ ಇಲ್ಲಿ ವಿಶೇಷವಾದ ಜಾತ್ರೆ ನಡೆಯುತ್ತದೆ. ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಭಕ್ತಾದಿಗಳು ದುರ್ಗಮ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲೆ ಬಂದು ಬೆಳಿಗ್ಗೆ 4 ಗಂಟೆಯಿಂದಲೇ ತೀರ್ಥಸ್ನಾನದಲ್ಲಿ ನಿರತರಾಗುತ್ತಾರೆ. ಅಂದು ವಿಶೇಷವಾದ ಪೂಜೆ ಪುನಸ್ಕಾರಗಳು ಕೇಶವನಾಥ ಸ್ವಾಮಿಗೆ ಸಲ್ಲಿಸಲ್ಪಡುತ್ತದೆ. ಗೆಂಡಸೇವೆ, ಮೈದರ್ಶನ ಸೇವೆ ಮೊದಲಾದ ಸೇವಾ ಪ್ರಕಾರಗಳು ಇಲ್ಲಿವೆ. ಈ ಕ್ಷೇತ್ರಕ್ಕೂ ಮುದೂರು ಸಮೀಪದ ಬೆಳ್ಕಲ್‍ಗೂ ಅವಿನಾಭಾವ ಸಂಪರ್ಕ-ಸಂಬಂಧವಿದೆ ಎನ್ನಲಾಗುತ್ತದೆ. ಬೆಳ್ಕಲ್ ಕ್ಷೇತ್ರಕ್ಕೆ ಹೋಗಿಬಂದ ಭಕ್ತರು ಇಲ್ಲಿಗೆ ಬಂದ ನಂತರವೇ ದೇವರಿಗೆ ಮಹಾಮಂಗಳಾರತಿ ಮಾಡಲಾಗುತ್ತದೆ ಇದು ಪರಂಪರಿಕ ಕಟ್ಟುಕಟ್ಟಾಳೆ.
ಹರದಲ್ಲಿ ನಿಂತು ಸೂರ್ಯನ ನೋಟ
ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲಿ ಇಲ್ಲದಿದ್ದರೂ ದೇವರ ನಿತ್ಯಪೂಜಾ ವಿಧಿ ನಿರ್ವಹಿಸಲು ಅರ್ಚಕರ ಕುಟುಂಬವೊಂದು ಇಲ್ಲಿ ನೆಲೆಸಿದೆ. ವೇ|ಮೂ| ರಾಘವೇಂದ್ರ ಕುಂಜತ್ತಾಯ ಎನ್ನುವ ಅರ್ಚಕರು ದೇವರ ನಿತ್ಯ ವಿಧಿಗಳನ್ನು ನೆರವೇರಿಸಿಕೊಂಡು ಬಂದಿದ್ದಾರೆ. ಅವರ ಪ್ರಕಾರ ಕ್ಷೇತ್ರದ ಮಹಿಮೆ ಅಪಾರ. ಈ ಗುಹೆಯಲ್ಲಿ ಸಾಕಷ್ಟು ಸಂಖ್ಯೆ ಮೀನುಗಳ ಜೊತೆ ಉರಗಗಳು ಇದ್ದರೂ ಕೂಡಾ ಯಾರಿಗೆ ಏನೂ ಮಾಡಲಾರವು. ಗುಹೆಗೆ ಸಮಾನಂತರವಾಗಿ ಅಶ್ವಥಕಟ್ಟೆಯಿದ್ದು, ರಾತ್ರಿವೇಳೆ ಅಶ್ವಥಕಟ್ಟೆಗೂ ಗುಹೆಗೆ ನೇರಾ ಬೆಳಕಿನ ರೇಖೆಗಳು ಹಾದು ಹೋಗುವುದನ್ನು ಗಮನಿಸಿದ್ದೇನೆ’ ಎನ್ನುವ ಅರ್ಚಕರು, ಕ್ಷೇತ್ರದಲ್ಲಿ ಹಲಾವರು ವಿಶೇಷಗಳನ್ನು ಕಂಡವರಿದ್ದಾರೆ.
ಈ ಕ್ಷೇತ್ರದ ಇತಿಹಾಸದ ಕುರಿತು ಯಾವುದೇ ಲಿಖಿತ ಮೂಲಗಳು ಇಲ್ಲದಿದ್ದರೂ ಕೂಡಾ ತುಂಬಾ ಪ್ರಾಚೀನ ಗುಹಾಂತರ ದೇವಾಲಯ ಇದು ಎನ್ನಲಾಗಿದೆ. ಶಿವ ಈ ಗುಹೆಯನ್ನು ಆಶ್ರಯಿಸಿ ಕಾಶಿಯನ್ನು ತಲುಪಿದ್ದಾನೆ ಎನ್ನುವ ಪ್ರತೀತಿ ಇದೆ. ಇಲ್ಲಿ ಹಲವಾರು ಮುನಿಗಳು ಶಿವನನ್ನು ಕುರಿತು ತಪವನ್ನಾಚರಿಸಿದ್ದಾರೆ ಎನ್ನಲಾಗುತ್ತಿದೆ. ಹಿಂದೆ ಬಿಟ್ರಿಷ್ ಅಧಿಕಾರಿ ಕರ್ನಲ್ ಲಾರ್ಡ್ ಮೆಕ್ಕಿಂಜೆ ಇಲ್ಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. (ಕುಂದಾಪ್ರ ಡಾಟ್ ಕಾಂ ಲೇಖನ)
ಇಲ್ಲಿ ಒಂದುವರೆ ಕಿ.ಮೀ ವ್ಯಾಪ್ತಿಯಲ್ಲಿ ಗತಕಾಲದಲ್ಲಿ ಕರಿಕಲ್ಲುಗಳಿಂದ ನಿರ್ಮಿಸಿದ ಕೋಟೆ ಈಗಲೂ ಇದೆ. ಮ್ಯಾಂಗ್‍ನಿಸ್ ನಿಕ್ಷೇಪಿತ ಕಲ್ಲುಗಳಿಂದ ಈ ಕೋಟೆ ನಿರ್ಮಿಸಲಾಗಿದ್ದು, ಈ ಕೋಟೆ ವ್ಯಾಪ್ತಿಯಲ್ಲಿ ಯಾವುದೇ ರಕ್ತಾಹಾರಕ್ಕೆ ಅವಕಾಶವಿಲ್ಲ. ಮೃಗಬೇಟೆ ಕೂಡಾ ಈ ಅವರಣದಲ್ಲಿ ಸಾಧ್ಯವಾಗುದಿಲ್ಲವಂತೆ. ಯಾವುದೇ ರಕ್ತಹಾರ ನೀಡಬೇಕಿದ್ದರೂ ಕೋಟೆಯ ಹೊರಭಾಗಕ್ಕೆ ಹೋಗಬೇಕು ಎನ್ನುತ್ತಾರೆ ಅರ್ಚಕರು. ನಾಡಿನ ಬಹುತೇಕ ಕಡೆ ಇರುವ ಕೋಟೆಗಳೆಲ್ಲಾ ನಾಮವಶೇಷವಾದರೂ ಕೂಡಾ ಇಲ್ಲಿಯ ಕೋಟೆ ಮಾತ್ರ ಇಂದಿಗೂ ಕಿಂಚಿತ್ತೂ ಲೋಪವಾಗದೆ ಹಾಗೆಯೇ ಉಳಿದಿದೆ.
ಉರಗಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ಇದ್ದರೂ ಕೂಡಾ ಅವುಗಳಿಂದ ಜನರಿಗೆ ತೊಂದರೆಯಾದ ನಿದರ್ಶನಗಳು ಇಲ್ಲವಂತೆ. ಗತಪೂರ್ವದಲ್ಲಿ ಓರ್ವ ಭೂಮಾಲಿಕರ ಗದ್ದೆಗೆ ನಿಗೂಢ ಪ್ರಾಣಿಯಿಂದ ಹಾನಿಯಾಗುತ್ತಿದ್ದಾಗ, ಒಂದು ರಾತ್ರಿ ಕಾದು ಅವರು ತನ್ನ ಬೆಳೆಯನ್ನು ಹಾನಿ ಮಾಡಿದ ಗೋವಿನ ಬೆನ್ನತ್ತಿ ಬಂದಾಗ ಅದು ಈ ಗುಹೆ ಹೊಕ್ಕಿತು. ಅದರ ಜೊತೆ ಭೂಮಾಲಿಕರು ಹೊಕ್ಕು ಸಾಕಷ್ಟು ದೂರ ತೆರಳಿದ ನಂತರ ಗೋವು ಕಣ್ಮರೆಯಾಯಿತು. ಕತ್ತಲೆ ಗುಹೆಯಲ್ಲಿ ಬಂಧಿಯಾದ ಭೂಮಾಲಿಕರು ಭಗವಂತನ ಸ್ಮರಣೆ ಮಾಡಿದಾಗ ಜ್ಯೋತಿಯೊಂದು ಹೊರ ಭಾಗದಿಂದ ಕಾಣಿಸಿಕೊಳ್ಳುತ್ತದೆ. ಅದನ್ನೆ ಅನುಸರಿಸಿದ ಬಂದ ಭೂಮಾಲೀಕರು ತನ್ನ 9 ಮುಡಿ ಗದ್ದೆಯನ್ನು ಉಂಬಳಿ ಬಿಟ್ಟಿದ್ದಾರೆ ಎನ್ನುವುದು ಪ್ರತೀತಿ. ಇಲ್ಲಿಗೂ ಪಕ್ಕದ ಮೇಳ್ಯ ಎಂಬ ಕೆರೆಗೆ ಸಂಪರ್ಕವಿದೆ ಎನ್ನಲಾಗಿದ್ದು, ಎಳ್ಳಮವಾಸ್ಯೆಯಂದು ಮೇಲ್ಯ ಕೆರೆಯಲ್ಲಿ ಹೂವಿನ ಎಸಳುಗಳು ತೇಲುವುದನ್ನು ಕಾಣಬಹುದಾಗಿದೆ. (ಕುಂದಾಪ್ರ ಡಾಟ್ ಕಾಂ ಲೇಖನ)
ದೇವಸ್ಥಾನದ ಎದುರು ಸುಂದರವಾದ ‘ಹರ’ ಪ್ರದೇಶವಿದೆ. ನೂರಾರು ಎಕರೆಯ ಮ್ಯಾಂಗನಿಸ್ ನಿಕ್ಷೇಪ ಹೊಂದಿರುವ ಈ ಪ್ರದೇಶದಲ್ಲಿ ನಿಂತು ಸೂರ್ಯಸ್ತ, ಉದಯ ನೋಡಬಹುದು. ಒಟ್ಟಾರೆಯಾಗಿ ಅತ್ಯಂತ ಸುಂದರವೂ ರಮಣೀಯವಾದ ಪ್ರದೇಶ ಇದು. ಕುಂದಾಪುರದಿಂದ 40 ಕಿ,ಮೀ ದೂರದಲ್ಲಿ, ಕೆರಾಡಿಯಿಂದ ನಾಲ್ಕು ಕಿ.ಮೀ ದೂರದಲ್ಲಿ ಈ ಕ್ಷೇತ್ರವಿದೆ. ಕೆರಾಡಿಯಿಂದ ತಕ್ಕಮಟ್ಟಿನ ರಸ್ತೆ ಇದೆ. ಈ ರಸ್ತೆಯ ಮೂಲಕವೂ ಬರಲು ಸಾಧ್ಯ. ಇಲ್ಲಿಗೆ ಹೋಗಬೇಕೆಂದರೆ ಮಳೆಗಾಲದ ನಂತರ ಹೋಗುವುದು ಒಳಿತು. ಮಳೆಗಾಲದಲ್ಲಿ ಎತ್ತರ ಭಾಗದಿಂದ ಮಳೆಯ ನೀರು ಹರಿದು ಬರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿರುತ್ತದೆ. ಪ್ರಯಾಣವಂತೂ ಪ್ರಯಾಸದ್ದು. ಆದ್ದರಿಂದ ನವಂಬರ್ ನಂತರ ಹೋದರೆ ಒಂದು ಒಳ್ಳೆಯ ಚಾರಣ ಆಗುವುದರಲ್ಲಿ ಅನುಮಾನವಿಲ್ಲ.
ನಾಗರಾಜ್ ವಂಡ್ಸೆ ಬಳಗೇರಿ