ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಮಳೆಗಾಲದಲ್ಲಿ ಪ್ರತಿಯೊಂದಕ್ಕೂ ಆ ತೊರೆಯನ್ನು ದಾಟಿಯೇ ನಡೆಯಬೇಕು. ಶಾಲೆಗೆ ಹೋಗುವ ಪುಟಾಣಿಗಳು ಹೊಂಡಾಗುಂಡಿ ದಾರಿ ಸವೇಸಿ ಹಳ್ಳ ದಾಟುವುದು ಅನಿವಾರ್ಯ. ಇತಿಹಾಸ ಪ್ರಸಿದ್ಧ ದೇವಾಲಯವೊಂದಕ್ಕೆ ತೆರಳಲೂ ಭಕ್ತರು ಇದೇ ಮಾರ್ಗವನ್ನು ಹಾದುಹೋಗಬೇಕು. ಇದು ವಂಡ್ಸೆ ಗ್ರಾಮದ ಅತ್ರಾಡಿ ಬಳಿಯ ತೊರೆಯಿಂದಾದ ದುಸ್ಥಿತಿ.
ಬೈಂದೂರು ವಿಧಾನ ಸಭಾ ಕ್ಷೇತ್ರ ವಂಡ್ಸೆ ಗ್ರಾಮ ಅಡಿಕೆಕೊಡ್ಲುವಿಗೆ ತೆರಳುವಲ್ಲಿ ಇರುವ ತೊರೆ ಮಳೆಗಾದಲ್ಲಿ ಅಗ್ನಿ ಪರೀಕ್ಷೆ ನಡೆಸುತ್ತಿದ್ದರೆ, ಬೇಸಿಗೆಯಲ್ಲಿ ಸತ್ತು ಮಲಗುತ್ತದೆ. ವಂಡ್ಸೆ ಮೂಲಕ ಆತ್ರಾಡಿ ಹೋಗುವ ದಾರಿಗೆ ಅಡ್ಡವಾಗಿ ತೊರೆಯ ಹೋರಿದೆ. ದಿನ ನಿತ್ಯ ಸಾರ್ವಜನಿಕರು, ಶಾಲಾ ಮಕ್ಕಳು ತೊರೆಯಲ್ಲಿ ಸರ್ಕಸ್ ಮಾಡಿ ದಾಟಿಬೇಕು. ಬೇಸಿಗೆಯಲ್ಲಿ ಅಡ್ಡಿಯಿಲ್ಲ. ಮಳೆಗಾದಲ್ಲಿ ಎಚ್ಚರ ತಪ್ಪಿದರೆ ದೇವರೇ ಕಾಪಾಡಬೇಕು. ಈ ದಾರಿ ಇತಿಹಾಸ ಪ್ರಸಿದ್ಧ ಶ್ರೀ ವನದುರ್ಗಾ ಪರಮೇಶ್ವರಿ ಕಾನಮ್ಮ ದೇವಸ್ಥಾನಕ್ಕೂ ಸಂಪರ್ಕ ಕಲ್ಪಸುತ್ತದೆ. ನಿತ್ಯ ಶಾಲಾ ಮಕ್ಕಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ವಂಡ್ಸೆ, ಅಡಿಕೆಕೊಡ್ಲು ಆತ್ರಾಡಿ ಸಮೀಪ ಬೆಸೆಯುವ ದಾರಿಯೂ ಹೌದು. ಈ ದಾರಿ ಬಿಟ್ಟರೆ ಕೊಂಕಣಸುತ್ತಿ ಮೈಲಾರ ಸೇರಿದಹಾಗೆ ವಂಡ್ಸೆ ಪೇಟೆ ಸೇರಬೇಕು.
ಆತ್ರಾಡಿ, ಅಡಿಕೆಕೊಡ್ಲು ಪರಿಸರದಲ್ಲಿ 200ರಷ್ಟು ಮನೆಯಿದೆ. ಪ್ರತಿದಿನ ವಂಡ್ಸೆ ಪೇಟೆಗೆ ಶಾಲೆಗೆ ಹೋಗುವವರು ಇದೇ ಹಳ್ಳ ಹಾರಿ ಹೋಗಬೇಕು. ಮಳೆಗಾಲದಲ್ಲಿ ಇಲ್ಲಿ ಸಂಚರಿಸುವುದೇ ದುಸ್ತರ. ಕಾನಮ್ಮ ದೇವಸ್ಥಾನದ ಪಕ್ಕದಲ್ಲಿರುವ ಈ ತೊರೆಗೆ ಕಿರು ಸೇತುವೆ ನಿರ್ಮಿಸಬೇಕು ಎನ್ನುವುದು ಇಲ್ಲಿನ ಗ್ರಾಮಸ್ಥರ ಹಲವಾರು ಕನಸು. ಪ್ರತಿ ಗ್ರಾಮಸಭೆಯಲ್ಲಿಯೂ ಸೇತುವೆ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಇದೂ ವರೆಗೆ ಕಾರ‍್ಯರೂಪಕ್ಕೆ ಬಂದಿಲ್ಲ. ಆತ್ರಾಡಿ, ಅಡಿಕೆಕೊಡ್ಲು ಪರಿಸರದಲ್ಲಿ ಮೂರು ವರ್ಷದ ಹಿಂದೆ ರಸ್ತೆ ನಿರ್ಮಿಸಲಾಗಿದೆ. ಇಲ್ಲಿನ ನಿವಾಸಿಗಳು ಕೃಷಿಕರು. ರಸ್ತೆಗಾಗಿ ಜಮೀನು ಬಿಟ್ಟುಕೊಟ್ಟ ಉದಾರಿಗಳು. ರೈತರು ಜಮೀನು ಕಳೆದುಕೊಂಡರೂ, ಸೇತುವೆ ನಿರ್ಮಾಣ ಸಾಕಾರಗೊಳ್ಳಲಿಲ್ಲ.
ಆತ್ರಾಡಿ, ಅಡಿಕೆಕೊಡ್ಲು ತೊರೆಗೆ ಸೇತುವೆ ನಿರ್ಮಾಣ ನಮ್ಮ ಕನಸು. ತೊರೆಗೆ ಕಿರು ಸೇತುವೆ ನಿರ್ಮಾಣವಾದಲ್ಲಿ ಅಡಿಕೆಕೊಡ್ಲು ಸಂಬಾರ್ತಿ ಪ್ರದೇಶಗಳಿಗೆ ಬಹಳಷ್ಟು ಹತ್ತಿರದ ಸಂಪರ್ಕವಾಗುತ್ತದೆ. ತೊರೆಯ ಎರಡೂ ಬದಿ ಮೂರು ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಯಾಗಿ ಮೂರು ವರ್ಷಗಳಾದರೂ ಸೇತುವೆ ಇಲ್ಲದೆ ರಸ್ತೆ ಕನ್ನಡಿ ಗಂಟು. – ರಕ್ಷಿತ್ ಕುಮಾರ್, ಎಂಎಸ್‌ಡಬ್ಲ್ಯೂ ವಿದ್ಯಾರ್ಥಿ, ವಂಡ್ಸೆ