ಕುಂದಾಪ್ರ ಡಾಟ್ ಕಾಂ ಲೇಖನ.
ಕುಂದಾಪುರ:ಕುಂದಾಪುರ ತಾಲೂಕು ಹಕ್ಲಾಡಿಯಲ್ಲಿರುವ `ಹಲ್ಸನಾಡು ಮನೆ’ ಪ್ರಾಚೀನ ಕಾಲದ ಕಾಷ್ಠಕಲೆಯ ಅದ್ಬುತ ಸ್ಮಾರಕ. ನಾಲ್ಕೂವರೆ ಶತಮಾನದ ಹಿಂದೆ ನಿರ್ಮಾಣವಾದ ಈ ಮನೆ, ಮನೆಯಾಗಿ ಕಾಣೋದಿಲ್ಲ. ನೋಡುಗರ ದೃಷ್ಟಿಯಲ್ಲಿ ಕಲಾ ವೈಭವದ ಅರಮನೆ. ಅರವತ್ತು ಅಂಕಣದ ಮನೆಯ ಎಲ್ಲಿನೋಡಿದರೂ ಕಷ್ಠಕಲೆಯ ವೈಭವ ಮೇಳೈಸಿದೆ. ಜಂತಿ, ಉಪ್ಪಿರಿಗೆ ಹೊದಿಕೆ ಪಕಾಶಿ, ಕಿಟಕಿ, ಕಂಬ, ತೊಲೆ ಎಲ್ಲವೂ ಕಲಾಮಯ.
ಕೆಳದಿ ಪ್ರಭವದ ನಂಟು: ಕೆಳದಿ ನಾಯಕರ ಪ್ರಭವ ಕುಂದಾಪುರ ಪ್ರಾಂತ್ಯದ ಮೇಲೆ ಅಧಿಕವಾಗಿದ್ದ ಕಾಲದಲ್ಲಿ ಹಲ್ಸನಾಡು ಮನೆಯವರು ದಕ್ಷಿಣ ಕನ್ನಡಕ್ಕೆ ವಲಸೆ ಬಂದರೆಂದು ಹೇಳಲಾಗುತ್ತಿದೆ. ಹಾಗೆಯೇ ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತೀ ದೊಡ್ಡ ಹಿಡುವಳಿದಾರರಾಗಿದ್ದರು ಎಂಬ ನಂಬಿಕೆಯೂ ಇದೆ. ಅದೆಲ್ಲಾ ಒತ್ತಿಟ್ಟಿಗಿಟ್ಟು ನೋಡಿದರೆ ಮನೆಯಂತೂ ಕಾಷ್ಠದಲ್ಲಿ ಕಲೆ ಹೂವಾಗಿ ಅರಳಿದೆ.
ಹಲ್ಸನಾಡು ಕಾಷ್ಠಕಲೆಯ ಕುರಿತು ಮದ್ರಾಸ್ (ಚೆನ್ನೈ) ಗೆಜಿಟಿಯರ್ ‘ಕೆಳದಿ ನೃಪ ವಿಜಯ’ ಆಕಾರ ಗ್ರಂಥದಲ್ಲಿ ನಮೂದಿಸಿದ್ದು ಹಲ್ಸನಾಡು ಮನೆಯ ಕಾಷ್ಠಕಲೆಯ ತಾಕತ್ತು. ಹಲ್ಸನಾಡು ಮನೆಯ ಹಿಂದಿನವರು ಕೆಳದಿ ಸೋಮಶೇಖರ ಮತ್ತು ಚಿನ್ನಾಮ್ಮಾಜಿ ಆಸ್ಥಾನದಲ್ಲಿ ಕರಣಿಕ ವೃತ್ತಿಯಲ್ಲಿದ್ದ ಕಾರಣ ಇವರಿಗೆ ರಾಜ ಸಂಪರ್ಕ, ಕಲಾವಿದರ ಮತ್ತು ಕಲಾಕಾರರ ನಿಕಟ ಸಂಪರ್ಕವಿತ್ತು. ಇದರ ಹಿನ್ನೆಲೆಯಲ್ಲಿ ಹಕ್ಲಾಡಿಯಲ್ಲಿ `ಹಲ್ಸನಾಡು’ ಮನೆ ಕಲಾ ವೈಭವದಲ್ಲಿ ಅರಳಿರಬಹುದೆಂಬ ಕತೆಯೂ ಇದೆ.
ಈ ಮನೆ 16ನೇ ಶತಮಾನದಲ್ಲಿ ರಾಮಪ್ಪಯ್ಯ ಎಂಬರಿಂದ ನಿರ್ಮಾಣಗೊಂಡಿತೆಂದು ಹಲ್ಸನಾಡು ಕುಟುಂಬದ ಪ್ರಸಕ್ತ ತಲೆಮಾರಿನ ಜನರ ಅಂಭೋಣ.ಇದೇ ರೀತಿಯ ಮನೆಗಳು ಬಂಟ್ವಾಳ ಸರಪಾಡಿ, ಶಂಕರನಾರಾಯಣ ಸೌಡಾದಲ್ಲಿದ್ದರೂ ಹಲ್ಸನಾಡು ಮನೆಯಷ್ಟು ಕಲಾ ನೈಪುಣ್ಯ, ವಿಸ್ತೀರ್ಣ, ಭವ್ಯತೆ ಇಲ್ಲ.
ಥಂಡಾ ಥಂಡಾ ಕೂಲ್ ಕೂಲ್: ಮನೆಯಲ್ಲಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹೋಗಲು ಇಳಿ ಮಾಡುಗಳಿವೆ. ಬೇಸಿಗೆಯಲ್ಲಿ ಉಷ್ಣಾಂಶ ಕಡಿಮೆ ಮಾಡುವ ನಿಟ್ಟಿನಲ್ಲಿ ನಿರ್ಮಾಣವಾದ ಎರಡು ಉಪ್ಪರಿಗೆಯ ಮಣ್ಣಿನ ಹಾಸು ಹಾಕಲಾಗಿದೆ. ಮಣ್ಣು ಬೇಸಿಗೆಯ ಉಷ್ಣ ಹೀರಿಕೊಳ್ಳುವುದರಿಂದ ಬೇಸಿಗೆ ಬಿಸಿ ಮನೆಯಲ್ಲಿದ್ದವರಿಗೆ ತಾಕುವುದಿಲ್ಲ. ಚಳಿಗಾದಲ್ಲಿ ಶೀತಗಾಳಿಯನ್ನು ಉಪ್ಪರಿಗೆಯ ಮಣ್ಣು ತೆಡಹಿಡಿಯುವುದರಿಂದ ಚಳಿಯ ಅನುಭವ ಆಗೋದಿಲ್ಲ.
ಮನೆಯ ಕಿಟಕಿಗಳು ಆಕೃತಿಯಲ್ಲಿ ಚಿಕ್ಕವಾದರೂ ಗಾಳಿ ಬೆಳಕು ಸಾಕಷ್ಟು ಬರುತ್ತದೆ. ನಡು ಮನೆಯಲ್ಲಿ ಸ್ವಲ್ಪ ಬೆಳಕಿನ ಅಭವವಿದ್ದರೂ ಅದು ಏಕಾಂತ ಧ್ಯಾನಕ್ಕೆ ಹೇಳಿಮಾಡಿಸಿದಂತಿದೆ. ಹಲಸು, ನಂದಿ, ಬೋಗಿ, ಬೀಟಿ, ತೇಗ ಮರಗಳು ಶಿಲ್ಪಿಯ ಕೈಯಲ್ಲಿ ಕಲೆಯ ಚಿತ್ತಾರವಾಗಿದೆ. ಮನೆಯ ಗೋಡೆ ಮಣ್ಣು ಮತ್ತು ಮರಳು ಮಿಶ್ರಣದಿಂದ ನಿರ್ಮಿಸಿದ್ದರಿಂದ ಗಟ್ಟಿಯಾಗಿದೆ. ಹಬ್ಬ ಹರಿದಿನಗಳಲ್ಲಿ ಬಂದು ಹೋಗುವವರು ಸಂಖ್ಯೆ ಜಾಸ್ತಿ ಇದ್ದ ಕಾರಣ 60ಕ್ಕೂ ಮಿಕ್ಕ ಕೋಣೆ ನಿರ್ಮಿಸಲಾಗಿತ್ತು. ಅದರಲ್ಲಿ ಕಲೆವೂ ಕಾಲದ ಹೊಡೆತಕ್ಕೆ ಸಿಕ್ಕಿ ನಾಶವಾಗಿವೆ.
ವಿದ್ಯಾ ದೇಗುಲ : ಹಕ್ಲಾಡಿ ಗ್ರಾಮಕ್ಕೆ ಆಸ್ಪತ್ರೆ, ವಿದ್ಯುತ್, ಹೈಸ್ಕೂಲ್, ಪ್ರಾಥಮಿಕ ಶಾಲೆ, ಮತ್ತು ರಸ್ತೆ ಸಂಪರ್ಕ ಕಲ್ಪಿಸದ ಹಿರೆಮೆ ಹಲ್ಸನಾಡು ದಿ.ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ. ಹಲ್ಸನಾಡು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಊಟ ವಸತಿಯೊಟ್ಟಿಗೆ ರಾಜಾಶ್ರಯ ನೀಡಿತ್ತು ಹಲ್ಸನಾಡು ಮನೆ.
ಮನೆ ಕಾಷ್ಟ ಕಲೆಗ ಸೀಮಿತವಾಗಿಲ್ಲ. ಅಪೂರ್ವ ವಸ್ತುಗಳ ಸಂಗ್ರಹ ಕೂಡಾ ಇದೆ. ಕಲಾತ್ಮಕ ತೂಗು ಮಂಚ, ಪಲ್ಲಕ್ಕಿ, ಲೆಕ್ಕಪತ್ರಗಳ ಕಡಿತ, ಓಲೆಗರಿಯ ಗ್ರಂಥ, ತಾಮ್ರ ಶಾಸನ, ಕಲ್ಲಿನ ಕಡಾಯಿ, ತರಕಾರಿ ಕತ್ತರಿಸುವ ತರಹೇವಾರಿ ಈಳಿಗೆ ಮಣೆ, ಹಳೆಯ ಕಾಲದ ಕಡಂಕ, ಪಾತ್ರೆ, ಹಿಂದನಕಾಲದ ಮೃಗ ಬೇಟೆ ಆಯುಧ, ಅತ್ಮರಕ್ಷಣಾಯುಧಗಳ ಸಂಗ್ರಹ ಈ ಮನೆಯಲ್ಲಿದೆ. ಮನೆಯ ಪಕ್ಕದಲ್ಲೇ ಸಣ್ಣದೊಂದು ಕೆರೆ ಕೂಡೆ ಇದೆ.
ಮನೆ ಶಿಥಿಲ : ಕಾಷ್ಠಕಲೆಯ ಬೀಡು ಹಲ್ಸನಾಡು ಮನೆ ಶಿಥಿಲಾವಸ್ಥೆಗೆ ಮುಟ್ಟಿದೆ. ಭೂ ಸುಧಾರಣೆಯ ನಂತರ ಈ ಕುಟುಂಬ ಜವನೋಪಯಕ್ಕಾಗಿ ಬೇರೆ ಬೇರೆ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದಾರೆ. ಜೀರ್ಣಾವಸ್ತೆಯಲ್ಲಿರುವ ಮನೆ ನವೀಕರಣ ಓರ್ವ ವ್ಯಕ್ತಿಯಿಂದ ಆಗುವ ಬಾಬೂ ಅಲ್ಲ. ಹಲ್ಸನಾಡು ಮನೆ ಉಳಿಯಬೇಕು ಅಂತಾದರೆ ಅಧಿಕಾರಿಗಳು ಮತ್ತು ಸರಕಾರ ಇತ್ತ ಗಮನ ಹರಿಸಬೇಕು. ಹಾಗಾಗದಿದ್ದರೆ ಹಲ್ಸನಾಡು ಮನೆ ಇತಿಹಾಸ ಸೇರುವ ದಿನ ದೂರವಿಲ್ಲ.
ಲೇಖನ: ಶ್ರೀಪತಿ ಹೆಗಡೆ ಹಕ್ಲಾಡಿ