ನಮಸ್ಕಾರ ಸರ್
ನನ್ನ ಬದುಕಿನ ಪ್ರತಿ ಕದಲುವಿಕೆಯಲ್ಲೂ ನಿಮ್ಮ ಶಕ್ತಿ, ನಿಮ್ಮ ನೆನಪುಗಳು ಮತ್ತು ನೀವೇ ಒದಗಿಸಿದ ಪ್ರಾರಂಭಿಕ ನೆಗೆತ ಇರುವುದರಿಂದ ನೀವು ನನ್ನ ವ್ಯಕ್ತಿತ್ವದ ಭಾಗವೇ ಆಗಿದ್ದೀರಿ. ನನ್ನೊಳಗೆ ನೀವು ಇರುವುದರಿಂದಲೋ ಅಥವಾ ನೀವು ನನ್ನಿಂದ ಹೊರತಾದ ಸಂಗತಿ ಎಂದು ಅನ್ನಿಸಿದ ಕಾರಣದಿಂದಲೋ ಗೊತ್ತಿಲ್ಲ ನಿಮ್ಮ ನೆನಪು ನನಗೆ ಆಗುವುದೇ ಇಲ್ಲ. ಆದರೆ, ನನ್ನ ನಡೆಯಲ್ಲಿ, ನುಡಿಯಲ್ಲಿ, ಬರೆವ ಬೆರಳುಗಳ ತುದಿಯಲ್ಲಿ ನಿಮ್ಮ ನೆರಳಿದೆ. ನನ್ನ ಆಲೋಚನೆಗಳಲ್ಲಿ ನೀವಿದ್ದೀರಿ. ನನ್ನೊಳಗೆ ನೀವು ನನಗೇ ಗೊತ್ತಿಲ್ಲದಂತೆ ಆವರಿಸಿಕೊಂಡಿದ್ದೀರಿ. ನಿಮ್ಮ ನೆನಪುಗಳು ಬಾರದಷ್ಟು ನೀವು ನನ್ನೊಳಗೆ ಸೇರಿಕೊಂಡಿದ್ದೀರಿ. ಈ ದಿನ ಎಲ್ಲರೂ ಶಿಕ್ಷಕರನ್ನು ನೆನೆವಾಗ ಇದೆಲ್ಲ ಹೇಗಾಯಿತು ಎಂದು ಅಚ್ಚರಿಪಡುತ್ತಿದ್ದೇನೆ.
ನೀವಂದುಕೊಂಡಂತೆ ನಾ ನಡೆಯಬೇಕೆಂದು ನೀವೆಂದೂ ಒತ್ತಡಹೇರಿದವರಲ್ಲ. ನಿಮ್ಮ ಆಲೋಚನೆಗಳೆಂದೂ ನನ್ನ ಭುಜದ ಮೇಲೆ ಕುಳಿತು ನನ್ನನ್ನು ಉಸಿರುಗಟ್ಟಿಸಲಿಲ್ಲ. ನಿಮ್ಮ ಅಭಿಪ್ರಾಯಗಳನ್ನು ನನ್ನ ಮೇಲೆ ಹೇರುವುದಿರಲಿ, ನೀವೇ ನನ್ನ ಅಭಿಪ್ರಾಯಗಳನ್ನು ಮನ್ನಿಸಿದ್ದೀರಿ, ಒಪ್ಪಿ ನಡೆದಿದ್ದೀರಿ. ಹೀಗೆ ನಡೆಯುತ್ತಲೆ ನೀವು ಹಿಂಬಾಲಿಸಿದಂತೆ ಅನ್ನಿಸಿದರೂ ನಾನೇ ನಿಮ್ಮನ್ನು ಅನುಸರಿಸುತ್ತಿದ್ದೆ ಎಂಬುದು ಈಗ ಹೊಳೆಯುತ್ತಿದೆ. ನನಗೆ ಕಲಿಸುವ ನೆಪದಲ್ಲಿ ನೀವೇ ನನ್ನಿಂದ ಕಲಿಯುತ್ತಿದ್ದೀರಿ ಎಂದು ಆಗ ನಾನು ಎಣಿಸಿಕೊಂಡಿದ್ದೆ. ನೀವು ಕಲಿಸುತ್ತಿದ್ದೀರೋ ನಾನೇ ನಿಮಗೆ ಕಲಿಸುತ್ತಿದ್ದೇನೋ ಅಥವಾ ನಾವು ಪರಸ್ಪರ ಒಡನಾಡುತ್ತಾ ಒಬ್ಬರಿಗೆ ಇನ್ನೊಬ್ಬರು ನೆರವಾಗುತ್ತಿದ್ದೇವೋ ಎಂದು ನಾನು ಅಂದುಕೊಳ್ಳುವ ಹಾಗೆ ನೀವು ಗುರುವಾಗಿ ದೂರ ನಿಲ್ಲದೆ ನನ್ನ ಒಡನಾಡಿಯಾಗಿ ಹತ್ತಿರವಾದಿರಿ. ಹಾಗೆ ನೋಡಿದರೆ, ನೀವು ನನಗೆ ಕಲಿಸಲೇ ಇಲ್ಲ; ನಾನೇ ಕಲಿಯುವಂತೆ ಮಾಡಿದ್ದೀರಿ. ಗುರುಗಳನ್ನು ಎಲ್ಲರೂ ದಾರಿದೀಪವೆನ್ನುತ್ತಾರೆ. ನೀವು ನನಗೆ ದಾರಿದೀಪವಾಗಲಿಲ್ಲ. ನನ್ನನ್ನೇ ನೀವು ದೀಪವಾಗಿಸಿದಿರಿ, ನೀವು ದಾರಿಯಾದಿರಿ.
ನನಗೆ ಆಟವಾಡುವುದನ್ನು ಕಲಿಸುವ ಬದಲು ನನ್ನೊಡನೆ ಆಟವಾಡಿದ್ದೀರಿ. ನಾನು ಗೆದ್ದಾಗ ನಿಮ್ಮದೇ ಗೆಲುವು ಎಂಬಂತೆ ಸಂಭ್ರಮಿಸಿ ದಿಗಿಲು ಹುಟ್ಟಿಸಿದ್ದೀರಿ. ನಾನು ಸೋತಾಗ ಹೆಗೆಲ ಮೇಲೆ ಕೈಯಿಟ್ಟು ಧೈರ್ಯ ತುಂಬಿದ್ದೀರಿ.
ಕವಿತೆಯನ್ನೂ ಗಣಿತವನ್ನೂ ನೀವದೆಷ್ಟು ಸುಂದರವಾಗಿ ಬೆಸೆಯುತ್ತೀರೆಂದರೆ, ಕುಮಾರವ್ಯಾಸನ ಪ್ರತಿ ಸಾಲಿನಲ್ಲೂ ನಾನು ಗಣಿತವನ್ನೂ ಸಂಖ್ಯೆಗಳ ಬಂಧಗಳ ನಡುವೆ ಕವಿತೆಯನ್ನೂ ಕಾಣುವಂತೆ ಮಾಡಿದ್ದೀರಿ. ವಿಜ್ಞಾನವನ್ನು ಬದುಕಿ ತೋರಿಸಿದ್ದೀರಿ, ಸಾಹಿತ್ಯವನ್ನು ನಮ್ಮೊಡನೆ ಉಸಿರಾಡಿದ್ದೀರಿ.
ನೀವು ತಿಳಿಹೇಳಲಿಲ್ಲ; ನನಗೇ ಹೆಚ್ಚು ತಿಳಿದಿದೆಯೆಂದು ಮನವರಿಕೆ ಮಾಡಿದ್ದೀರಿ ಅಥವಾ ನಾನು ಹಾಗೆಂದುಕೊಳ್ಳುವಂತೆ ಆತ್ಮವಿಶ್ವಾಸ ತುಂಬಿದ್ದೀರಿ. ನೀವು ನನಗೆ ಕಲಿಸುವ ಗುರುವೆಂದು ಆಗ ಅನ್ನಿಸಿರಲಿಲ್ಲ. ನೀವೂ ಹಾಗೆ ನಡೆದುಕೊಳ್ಳಲಿಲ್ಲ. ನಿಮಗೂ ಗೊತ್ತಿರದ ಸಂಗತಿಗಳು ಬಹಳಷ್ಟಿವೆ ಎಂಬುದು ನನಗೆ ಗೊತ್ತಾಗುವ ಹಾಗೆ `ಓ ಹೌದಾ?’ `ನಿನಗೆ ಗೊತ್ತಾ?’ `ಓಹ್, ನೀನು ಹೇಳಿದ ಮೇಲೆಯೇ ನನಗೆ ಹೊಳೆಯಿತು ನೋಡು!’ ಎಂದು ಚಕಿತರಾಗುತ್ತಿದ್ದಿರಿ. ನೀವು ನನ್ನಲ್ಲಿ ಕೇಳುವ ಅನೇಕ ಪ್ರಶ್ನೆಗಳು ಪರೀಕ್ಷಾರ್ಥವೆನಿಸುತ್ತಿರಲಿಲ್ಲ: ನಿಮಗೆ ನನ್ನಿಂದ ಕಲಿಯುವ ಅನೇಕ ವಿಷಯಗಳಿವೆ ಎಂದು ಅನ್ನಿಸುತಿತ್ತು. ಅನ್ನಿಸಿ ಖುಷಿಯಾಗುತಿತ್ತು ಕೂಡಾ.
ನನ್ನ ತಪ್ಪುಗಳನ್ನು ನೀವು ಕಂಡಿದ್ದೀರಿ, ಕೆಲವನ್ನು ಕಂಡೂ ಕಾಣದಂತೆ ಅವಗಣಿಸಿದ್ದೀರಿ. ಇನ್ನು ಕೆಲವನ್ನು ಸರಿಪಡಿಸಿದ್ದೀರಿ. ಆದರೆ, ಅವುಗಳನ್ನೆಂದೂ ನೀವು ಗುಡ್ಡಮಾಡಿ ಅವಮಾನಿಸಲಿಲ್ಲ ಅಥವಾ ಆ ಗುಡ್ಡದೆದುರು ನಿಲ್ಲಿಸಿ ನನ್ನನ್ನು ಕುಬ್ಜನನ್ನಾಗಿಸಿರಲಿಲ್ಲ. ನನ್ನ ಒಳ್ಳೆಯ ಗುಣಗಳನ್ನು ಎತ್ತಿ ಹೇಳಿದ್ದೀರಿ. ನನ್ನ ತಾಯಿ-ತಂದೆ, ಬಂಧುಗಳು ನನ್ನ ಕುರಿತು ಹೆಮ್ಮೆಪಟ್ಟುಕೊಳ್ಳುವಂತೆ ಮಾಡಿದ್ದೀರಿ. ಹಾಗೆ ಮಾಡುತ್ತಲೆ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಹುರಿದುಂಬಿಸಿದ್ದೀರಿ.
ನಿಮ್ಮ ಬಳಿ ನಾನಾಡದೆ ಉಳಿದಿರುವ ಮಾತುಗಳೇ ಇಲ್ಲ ಎಂದು ನನಗನ್ನಿಸುವ ಹಾಗೆ ನನ್ನೊಡನೆ ಮಾತನಾಡಿದ್ದೀರಿ. ನನ್ನ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿರದಿದ್ದರೂ ಕೇಳುವ ಕಿವಿಗಳು ಯಾವಾಗಲೂ ಇದ್ದವು. ನನ್ನ ಪ್ರಶ್ನೆಗಳಿಗೆ ಕೆಲವೊಮ್ಮೆ ಉತ್ತರ ನೀಡುವ ಬದಲು ಇನ್ನೊಂದಿಷ್ಟು ಪ್ರಶ್ನೆಗಳನ್ನೇ ನೀಡುತ್ತಿದ್ದಿರಿ. ನೀವೆಷ್ಟು ಶಾಂತವಾಗಿ ನನ್ನನ್ನು ಆಲಿಸುತ್ತಿದ್ದಿರೆಂದರೆ ಇನ್ನೊಂದಿಷ್ಟು ಪ್ರಶ್ನೆಗಳನ್ನು ಕೇಳಲು ಉತ್ಸಾಹವುಂಟಾಗುತಿತ್ತು. ನಾನೇ ಕೇಳಿದ ಹಿಂದಿನ ಪ್ರಶ್ನೆಗಳ ಉತ್ತರವು ನನ್ನದೇ ಮುಂದಿನ ಪ್ರಶ್ನೆಗಳಲ್ಲಿ ಅವಿತಿರುವುದು ಅರಿವಾಗಿ ಕುಣಿದು ಕುಪ್ಪಳಿಸುತ್ತಿದ್ದೆ.
ಕತೆಗಳನ್ನು ನಿಮ್ಮ ದೇಹದ ಮೂಲಕವೂ ಕವಿತೆಗಳನ್ನು ನಿಮ್ಮ ಕಣ್ಣುಗಳ ಮೂಲಕವೂ ಹೇಳುತ್ತಾ ನಿಮ್ಮ ಇಡೀದೇಹ ನನಗಾಗಿ ಇದೆಯೆಂದು ಅನ್ನಿಸುವಂತೆ ಮಾಡಿದ್ದೀರಿ.
ಗುರುವು ಮಗುವಿಗೆ ಎಷ್ಟು ಹತ್ತಿರವಾಗಬಹುದು? ಎಣಿಸಿದರೆ, ನಾನು ಚಕಿತನಾಗುತ್ತೇನೆ. ನೀವು ಎಷ್ಟು ಹತ್ತಿರವಾಗಿದ್ದೀರಿ ಎಂದರೆ, ನನ್ನಿಂದ ಪ್ರತ್ಯೇಕಿಸಲಾಗದಷ್ಟು ನನ್ನ ವ್ಯಕ್ತಿತ್ವದಲ್ಲಿ ಬೆಸೆದುಹೋಗಿದ್ದೀರಿ- ನನಗೆ ಗೊತ್ತಿಲ್ಲದಂತೆ.
ಶಿಕ್ಷಕರ ದಿನದಂದು ಅರಿವಿನ ಗುರುವಿಗೆ ನನ್ನ ಸಲಾಂ.
ಉದಯ ಗಾಂವಕಾರ