ಪಿಯುಸಿ ಮುಗಿಯಿತು. ಮುಂದೇನು ಮಾಡುವುದು ಎಂಬ ಯೊಚನೆ ಸಾಮಾನ್ಯ. ಅಂಥವರಿಗಾಗಿ ಹತ್ತು ಪ್ರಮುಖ ಆಯ್ಕೆಗಳು ಇಲ್ಲಿದೆ
ಮಾಸ್ ಕಮ್ಯೂನಿಕೇಶನ್: ಜನರ ಜೊತೆ ಸಂಪರ್ಕ ಸಾಧಿಸುವ ವೃತ್ತಿಯನ್ನು ಬಯಸುವವರು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 12ನೇ ತರಗತಿ ಬಳಿಕ ಈ ಕೋರ್ಸ್ ಸೇರುವವರ ಸಂಖ್ಯೆ ಬಹು ದೊಡ್ಡದಿದೆ. ಸಾರ್ವಜನಿಕ ವ್ಯವಹಾರ, ಜಾಹೀರಾತು, ಪತ್ರಿಕೋದ್ಯಮ, ಸಮೂಹ ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಆಂಡ್ ನ್ಯೂ ಮೀಡಿಯಾ ಸೇರಿದಂತೆ ಹಲವಾರು ಸಂಸ್ಥೆಗಳು ಈ ಕೋರ್ಸನ್ನು ಆಫರ್ ಮಾಡುತ್ತಿವೆ.
ಈವೆಂಟ್ ಮ್ಯಾನೇಜ್‌ಮೆಂಟ್ : ಕೇವಲ ಡಿಗ್ರಿ ಮಾಡದೆ ಉತ್ತಮ ವೃತ್ತಿ ಭವಿಷ್ಯದ ನಿರೀಕ್ಷೆಯಲ್ಲಿರುವವರಿಗೆ ಇದು ಅತ್ಯಂತ ಸೂಕ್ತ ಕೋರ್ಸ್. ಈ ಕ್ಷೇತ್ರದ ಸಂಪೂರ್ಣ ಒಳನೋಟವನ್ನು ಕೋರ್ಸ್ ನೀಡುತ್ತದೆ ಎಂಬುದಕ್ಕೆ ವರ್ಷದಿಂದ ವರ್ಷಕ್ಕೆ ಇದನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದೇ ಸಾಕ್ಷಿ. ಕೆಲವು ಶಿಕ್ಷಣ ಸಂಸ್ಥೆಗಳು ಯಶಸ್ವಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗವನ್ನೂ ಕೊಡಿಸುತ್ತವೆ. ಐಟಿಎಫ್‌ಟಿ, ಐಸಿಇಎಂ, ಎನ್‌ಐಇಎಂನಂತಹ ಸಂಸ್ಥೆಗಳಲ್ಲಿ ಈ ಕೋರ್ಸ್‌ಗಳು ಲಭ್ಯವಿವೆ.
ಫ್ಯಾಶನ್ ಡಿಸೈನ್ : ಸದ್ಯದ ಮಟ್ಟಿಗೆ ಅವಕಾಶಗಳ ಮಹಾಪೂರವನ್ನೇ ಒದಗಿಸುವ ಕೋರ್ಸ್ ಫ್ಯಾಶನ್ ಡಿಸೈನಿಂಗ್. ಕಲಾ ವಿಭಾಗದಲ್ಲಿ 12ನೇ ತರಗತಿ ಪೂರೈಸಿದ ವಿದ್ಯಾರ್ಥಿಗಳಿಗೆ ಹಲವಾರು ಸಂಸ್ಥೆಗಳು ಡಿಪ್ಲೊಮಾ ಮತ್ತು ಪದವಿ ಹಾಗೂ ಸ್ನಾತಕೋತ್ತರ ಕೊರ್ಸ್‌ಗಳನ್ನು ಆಫರ್ ಮಾಡುತ್ತಿವೆ. ಜವಳಿ ವಿನ್ಯಾಸ ತಂತ್ರಜ್ಞಾನ ಮತ್ತು ಉತ್ಪಾದನೆಯ ಬಗ್ಗೆ ಇಲ್ಲಿ ಕಲಿಸಲಾಗುತ್ತದೆ. ಇದು ಮುಖ್ಯವಾಗಿ 25 ವರ್ಷದೊಳಗಿನವರನ್ನು ಗುರಿಯಾಗಿಸಿಕೊಂಡಿದೆ. ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಹಲವಾರು ಕಾಲೇಜುಗಳು ಫ್ಯಾಶನ್ ಡಿಸೈನಿಂಗ್ ಕೋರ್ಸ್‌ಗಳನ್ನು ಆಫರ್ ಮಾಡುತ್ತಿವೆ.
ನಟನಾ ಕೌಶಲ್ಯ: ಗ್ಲಾಮರ್ ಜಗತ್ತನ್ನು ಪ್ರವೇಶಿಸಿ ಜನಪ್ರಿಯವಾಗಬೇಕೆಂಬ ಬಯಕೆಯಿದ್ದರೆ ಅದಕ್ಕೆ ಅತ್ಯುತ್ತಮ ಅವಕಾಶ ನೀಡುತ್ತದೆ ಆ್ಯಕ್ಟಿಂಗ್ ಕೋರ್ಸ್. ಇದರಲ್ಲಿ ಊಹನೆ ಮತ್ತು ಸೂಕ್ಷ್ಮ ನೋಟ ಹಾಗೂ ಸ್ಪಂದನೆಗೆ ಮಹತ್ವದ ಪಾತ್ರವಿದೆ. ಹೀಗಾಗಿ ಅಂತಹ ಮನೋಭಾವ ಮತ್ತು ಸಾಮರ್ಥ್ಯ ಉಳ್ಳವರು ಇದಕ್ಕೆ ಸೇರಬಹುದು. ಈ ಮೂಲಕ ನಾಟಕ, ಸಿನಿಮಾ ರಂಗದಲ್ಲಿ ಹೆಸರು ಮಾಡಬಹುದು.
ಬ್ಯುಟೀಶಿಯನ್ ಕೋರ್ಸ್: ಇದೊಂದು ಯಾವತ್ತೂ ಮರೆಯಾಗದ ಕೋರ್ಸ್ ಎಂದೇ ಹೇಳಬಹುದು. ಸೌಂದರ್ಯ ಪ್ರತಿಯೊಬ್ಬರ ಹುಚ್ಚು. ತಾನು ಚೆನ್ನಾಗಿ ಕಾಣಿಸಬೇಕು ಎಂಬ ಮಾನವನ ಮನಸ್ಥಿತಿಯಿಂದಲೇ ಈ ಕೋರ್ಸ್ ಹೆಚ್ಚು ಜನಪ್ರಿಯವಾಗಿದೆ. ದೇಶಾದ್ಯಂತ ಹಲವಾರು ಖಾಸಗಿ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳು ಈ ಕೋರ್ಸ್ ಒದಗಿಸುತ್ತವೆ.
ವಿದೇಶಿ ಭಾಷೆ : ಈಗಂತೂ ಬಹುರಾಷ್ಟ್ರೀಯ ಕಂಪನಿಗಳ ಮಹಾಪೂರವೇ ಭಾರತಕ್ಕೆ ಹರಿದು ಬರುತ್ತಿದೆ. ಹೀಗಾಗಿ ಪ್ರಮುಖ ನಗರಗಳಲ್ಲಿ ವಿದೇಶಿ ಭಾಷೆ ಕಲಿಕೆಗೆ ಮಹತ್ವ ಸಿಕ್ಕಿದೆ. ಸ್ಪಾನಿಶ್, ಫ್ರೆಂಚ್, ಕೊರಿಯನ್, ಜಪಾನೀಸ್, ರಷ್ಯನ್ ಮೊದಲಾದ ಭಾಷೆಗಳ ಕಲಿಕೆ ಕೋರ್ಸ್ ಹೆಚ್ಚು ಜನಪ್ರಿಯವಾಗಿದೆ. ರಾಜ್ಯದಲ್ಲೂ ಹಲವಾರು ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂತಹ ವಿದೇಶಿ ಭಾಷೆಗಳನ್ನು ಕಲಿಸುವ ಕೋರ್ಸ್‌ಗಳನ್ನು ಆಫರ್ ಮಾಡುತ್ತಿವೆ.
ನೃತ್ಯ ಪಟು : ಕಲಾ ವಿಭಾಗದಲ್ಲಿ ಪಿಯುಸಿ ಬಳಿಕ ಮತ್ತೊಂದು ಉತ್ತಮ ಆಯ್ಕೆಯೆಂದರೆ ಡ್ಯಾನ್ಸ್ ಕೋರ್ಸ್. ಈ ಕೋರ್ಸ್ ಮಾಡಿದವರು ಮುಂದೆ ಕೊರಿಯೋಗ್ರಾಫರ್ ಆಗಬಹುದು. ಇದನ್ನು ಹೊರತು ಪಡಿಸಿ ಡ್ಯಾನ್ಸ್ ಟೀಚರ್, ತಾನೇ ಈವೆಂಟ್‌ಗಳನ್ನು ಆಯೋಜಿಸುವುದು ಮೊದಲಾದವನ್ನು ಮಾಡಬಹುದು. ಕೆಲವೊಂದು ಸಂಸ್ಥೆಗಳು ಡ್ಯಾನ್ಸ್ ಪ್ರಾಜೆಕ್ಟ್‌ಗಳಿಗೆ ಫೆಲೋಶಿಪ್ ಕೂಡ ನೀಡುತ್ತವೆ.
ವೀಡಿಯೋ ವಿಶುವಲ್ ಮೀಡಿಯಾ ಕೋರ್ಸ್: ಇದು ದೃಶ್ಯ ಮತ್ತು ಶ್ರವ್ಯ ಎರಡರ ಸಮ್ಮಿಶ್ರಣ. ಇಲ್ಲಿ ಉಪಕರಣಗಳ ಅಧ್ಯಯನವೂ ಸೇರಿರುತ್ತದೆ. ಪತ್ರಿಕೋದ್ಯಮ, ಸಿನಿಮಾ ನಿರ್ಮಾಣ, ಮಾಧ್ಯಮ ಪ್ರಚಾರ, ಬ್ರಾಂಡ್ ಪ್ರಚಾರ, ಫೋಟೋಗ್ರಫಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂದೆ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಮೈಸೂರು ವಿವಿ ಸೇರಿದಂತೆ ರಾಜ್ಯದ ಹಲವೆಡೆ ಈ ಕೋರ್ಸ್ ಲಭ್ಯವಿದೆ.
ಉದ್ಯಮ ಕೋರ್ಸ್: ಇತ್ತೀಚೆಗೆ ಈ ಕೋರ್ಸ್ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಔಪಚಾರಿಕ ಶಿಕ್ಷಣ ಇಲ್ಲದಿರುವುದು ಇದಕ್ಕೆ ಕಾರಣ. ಪಿಯುಸಿ ಪಾಸಾದ ಬಳಿಕ ಹೊಸತನ ಅಥವಾ ಹೊಸ ಉದ್ಯಮ ಆರಂಭಿಸುವ ಕನಸು ಕಾಣುತ್ತಿರುವವರು ಈ ಕೋರ್ಸ್‌ಗೆ ಸೇರಬಹುದು. ಬೆಂಗಳೂರಿನ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸೇರಿದಂತೆ ದೇಶಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳು ಈ ಕೋರ್ಸನ್ನು ಆಫರ್ ಮಾಡುತ್ತಿವೆ.
ಹೊಟೇಲ್ ಮ್ಯಾನೇಜ್‌ಮೆಂಟ್ : ಹಾಸ್ಪಿಟಾಲಿಟಿ ಕ್ಷೇತ್ರವು ಭಾರತದಲ್ಲಿ ಈಗ ವಿಸ್ತಾರವಾಗಿ ಹರಡಿಕೊಂಡಿದೆ. ಅದರಲ್ಲೂ ನಗರೀಕರಣದ ಪ್ರಭಾವ ಈ ಕ್ಷೇತ್ರವನ್ನು ಇನ್ನಷ್ಟು ಆಕರ್ಷಕವಾಗುವಂತೆ ಮಾಡಿದೆ. ಹೀಗಾಗಿ 12ನೇ ತರಗತಿ ಬಳಿಕ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಸೇರಬಹುದು. ಮಣಿಪಾಲದ ಗ್ರಾಜುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಷನ್ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳು ಈ ಕೋರ್ಸನ್ನು ಆಫರ್ ಮಾಡುತ್ತಿವೆ.