ಜೀವನದಲ್ಲಿ ಎನನ್ನಾದರೂ ಸಾಧಿಸಬೇಕೆಂಬ ತುಡಿತ ಎಲ್ಲರಲ್ಲೂ ಇರುತ್ತಾದರೂ ಹಾಗೆ ಅಂದುಕೊಂಡವರೆಲ್ಲಾ ಸಾಧಿಸಿಬಿಡುವುದಿಲ್ಲ. ತಾನು ಕಟ್ಟಿಕೊಳ್ಳುವ ಕನಸಿನ ಸಾಕಾರಗೊಳಿಸಲು ಯಾರು ಮನಪೂರ್ವಕವಾಗಿ ದುಡಿಯುತ್ತಾರೋ ಅಂತವರು ಮಾತ್ರ ಎಲ್ಲಾ ತೊಡಕುಗಳನ್ನು ಮೀರಿ ಗೆಲ್ಲಬಲ್ಲರು.ಹೀಗೆ ಬದುಕಿನಲ್ಲಿ ನೂರಾರು ಕನಸುಗಳನ್ನು ಕಟ್ಟಿಕೊಂಡು ಸಾಧನೆಯತ್ತ ಮುಖಮಾಡಿ ನಿಂತವನೇ ನಮ್ಮ ಕುಂದಾಪುರದ ಹುಡ್ಗ ಗೌತಮ್ ಜಾದುಗಾರ್.
ಜಾದು ಕಲೆಯನ್ನು ಕರಗತ ಮಾಡಿಕೊಂಡು ತನ್ನ 22ನೇ ವಯಸ್ಸಿನಲ್ಲಿಯೇ 1300ಕ್ಕೂ ಅಧಿಕ ಜಾದು ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿರುವ ಗೌತಮ್, ಉತ್ತಮ ಗಾಯಕನಾಗಿ, ಸಂಗೀತಕಾರನಾಗಿ, ನಟನಾಗಿಯೂ ತನ್ನ ಪ್ರತಿಭೆಯನ್ನು ತೋರ್ಪಡಿಸಿಕೊಂಡಿದ್ದಾರೆ. ಸದ್ಯ ಸಿನಿಮಾವೊಂದರಲ್ಲಿ ಸಹನಿರ್ದೇಶಕರಾಗಿ ದುಡಿಯುತ್ತಿರುವ ಇವರು ಇತ್ತಿಚಿಗೆ ಕುಂದಾಪ್ರ ಡಾಟ್ ಕಾಂಗೆ ಮಾತಿಗೆ ಸಿಕ್ಕಾಗ ತನ್ನ ಬದುಕಿನ ಪುಟಗಳನ್ನು ತೆರೆದಿಟ್ಟರು.
ಮೂಲತಃ ಕುಂದಾಪುರದವರಾದ ಕೆ. ಪಾಂಡುರಂಗ ಹಾಗೂ ಉಷಾ ದಂಪತಿಗಳ ಪುತ್ರರಾದ ಇವರು ತನ್ನ ಪಿಯುಸಿ ವರೆಗಿನ ಶಿಕ್ಷಣವನ್ನು ಚಿತ್ರದುರ್ಗ, ಮಲೆಬೆನ್ನೂರು, ಹರಿಹರದಲ್ಲಿ ತೀರ್ಥಹಳ್ಳಿಯಲ್ಲಿ ಪಡೆದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಚಿಕ್ಕಂದಿನಿಂದಲೂ ಜಾದುವಿನ ಬಗೆಗೆ ಆಸಕ್ತಿ ಹೊಂದಿದ್ದ ಗೌತಮ್ ಆಗಾಗ ನಡೆಯುತ್ತಿದ್ದ ಜಾದು ಪ್ರದರ್ಶನಗಳನ್ನು ವಿಕ್ಷೀಸಿ ಮನೆಯಲ್ಲಿ ಪ್ರಯತ್ನಿಸುವುದನ್ನು ರೂಢಿಸಿಕೊಂಡು ಹಲವಾರು ಜಾದು ಬಗೆಗಿನ ಪುಸ್ತಕಗಳನ್ನು ನಿರಂತರವಾಗಿ ಓದುತ್ತಾ ಜಾದುವಿನ ಒಂದೊಂದೇ ಅಂಶಗಳನ್ನು ಅರಿಯುತ್ತ ಬಂದರು. ಎಂಟನೇ ತರಗತಿಯಲ್ಲಿರುವಾಗ ತನ್ನ ಮೊದಲ ಜಾದೂ ಪ್ರದರ್ಶನವನ್ನು ನೀಡಿ ಸೈಎನಿಸಿಕೊಂಡವರು ಅಲ್ಲಿಂದಾಚೆಗೆ ಗೌತಮ್ ಹಿಂತಿರುಗಿ ನೋಡಲಿಲ್ಲ. ಇವರ ಜಾದುವಿನ ಬಗೆಗಿನ ಆಸಕ್ತಿಯನ್ನು ಮೆಚ್ಚಿ ತಿರ್ಥಹಳ್ಳಿಯ ವಿಜಯ ಜಾದೂಗಾರ್ ಪ್ರೋತ್ಸಾಹಕರಾಗಿ ನಿಂತರು. ವಿಜಯ ಮ್ಯಾಜಿಕ್ ವರ್ಲ್ದ್ ನ 25 ಜನರ ತಂಡದಲ್ಲಿದ್ದುಕೊಂಡು ರಾಜ್ಯದ ಹಲವೆಡೆ ಯಶಸ್ಸಿ ಪ್ರದರ್ಶನಗಳನ್ನು ನೀಡಿ ಅಪಾರ ಜನಮನ್ನಣೆ ಗಳಿಸಿದರು.
ನಟನೆಯಲ್ಲಿ ಹಾಗೂ ಮಿಮಿಕ್ರಿಯಲ್ಲಿ ಆಸಕ್ತಿ ಹೊಂದಿದ್ದ ಗೌತಮ್ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪಂಚತಂತ್ರದ ಕಥೆಗಳು ಟೆಲಿಫಿಲ್ಮ್ ನಲ್ಲಿ ನಟನೆ, ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಧುವನ ಧಾರಾವಾಹಿಯಲ್ಲಿ ನಟನೆ, ಗಾಳಿಪಟ ಸಿನೆಮಾದ ನದಿಮ್ ಧೀಂ ತನ ಹಾಡಿಗೆ ಹೆಜ್ಜೆ ಹಾಕಿರುವುದು, ಇನ್ನಿತರ ಸಿನೆಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿರುವುದು ಸೇರಿದಂತೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ಯಕ್ಷಗಾನದಲ್ಲಿ, ಸಮುದಾಯ ಕುಂದಾಪುರದ ನಾಟಕಗಳಲ್ಲಿ ಬಣ್ಣಹಚ್ಚಿ ಮಿಂಚಿದ್ದಾರೆ.
ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ಸುಗಮ ಸಂಗೀತವನ್ನು ಅಭ್ಯಸಿಸಿರುವ ಗೌತಮ್ ಹಾರ್ಮೋನಿಯಂ, ಗಿಟರ್ ಬಾರಿಸುವುದರಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಮಾರ್ಷಲ್ ಆರ್ಟ್ಸ್ ನಲ್ಲಿ ತರಬೇತಿ ಪಡೆದು ಟ್ಯಾಕ್ಮೆಂಡೊದ ಬ್ಲೂ ಬೆಲ್ಟ್, ಕಿಕ್ ಬಾಸ್ಸಿಂಗ್ ನ ಗ್ರೀನ್ ಬೆಲ್ಟ್ ತನ್ನದಾಗಿಸಿಕೊಂಡಿದ್ದಾರೆ.
ಶಿವಮೊಗ್ಗದ ಜಿಲ್ಲಾ ಸಾಹಿತ್ಯ ಸಮ್ಮೇಳನ, ಹಾನ್ಗಲ್ ಉತ್ಸವ, ಯುವಜನೋತ್ಸವ ಸೇರಿದಂತೆ ರಾಜ್ಯದ ವಿವಿಧೆಡೆ 1300ಕ್ಕೂ ಮಿಕ್ಕಿ ಜಾದು ಪ್ರದರ್ಶನಗಳನ್ನು ನೀಡಿರುವುದು, ಸುವರ್ಣ ವಾಹಿನಿಯ ಸೂಪರ್ ಸ್ಟಾರ್ ಆಫ್ ಕರ್ನಾಟಕ ರಿಯಾಲಿಟಿ ಶೋ ನಲ್ಲಿ ಭಾಗಿ, ಸೋನಿ ವಾಹಿನಿಯ ರಿಯಾಲಿಟಿ ಶೋ ಇಂಡಿಯನ್ ಐಡೆಲ್-6 ಗೆ ಸ್ವರ್ಧಿಸಿದ್ದು ಗೌತಮ್ ಸಾಧನೆಗೆ ಹಿಡಿದ ಕನ್ನಡಿ. ತನ್ನ ಪ್ರತಿಭೆಯನ್ನೇ ಆಸ್ತಿಯನ್ನಾಗಿಸಿಕೊಂಡು ಯಶಸ್ಸಿನತ್ತ ಮುನ್ನುಗ್ಗುತ್ತಿರುವ ಗೌತಮ್ ನನ್ನು ಪ್ರೋತ್ಸಾಹಿಸಿ, ಶುಭಹಾರೈಸೋಣ.
ಸಿಕ್ಕ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಯಾರ ಜೀವನವೂ ಕಷ್ಟಗಳಿಂದ ಹೊರತಾದುದಲ್ಲ. ಕಷ್ಟಗಳನ್ನು ಮೀರಿ ಪರರನ್ನು ನಗಿಸುವ ಕಾಯಕದಲ್ಲಿ ನಿಜವಾದ ಆತ್ಮತೃಪ್ತಿ ಅಡಗಿದೆ. -ಗೌತಮ್ ಜಾದೂಗಾರ್