ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಅಮಾಸೆಬೈಲು: ಅಂಧತ್ವ ಅನ್ನೋದು ಕಣ್ಣಿಗೆ ಹೊರತು ಒಳಗಣ್ಣಿಗಲ್ಲ. ಬದುಕುವ ಛಲವಿದ್ದರೆ, ಎಂಥಹ ಸಂದರ್ಭವನ್ನೂ ಎದುರಿಸುವ ತಾಕತ್ತಿದ್ದರೇ ತನ್ನಲ್ಲಿನ ವಿಕಲತೆ ಅಡ್ಡಿಯಾಗದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ತೊಂಬಟ್ಟಿನ ಅಂಧ ದಂಪತಿಗಳು. ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಸ್ಥಳೀಯ ಗ್ರಾಮ ಪಂಚಾಯತ್‌ನೊಂದಿಗೆ ಸೆಣಸುತ್ತಾ, ತಮ್ಮ ಹಕ್ಕಿಗಾಗಿ ಹೋರಾಡುತ್ತಲೇ ಬದುಕು ಕಟ್ಟಿಕೊಂಡು ಮಾದರಿಯಾಗಿದ್ದಾರೆ.
ಅಮಾಸೆಬೈಲು ಗ್ರಾಮ ತೊಂಬಟ್ಟು ಭಟ್ರಪಾಲು ನಿವಾಸಿ ನಾರಾಯಣ ಪೂಜಾರಿ ರಾಧಾ ಪೂಜಾರಿ ನಾಲ್ವರ ಮಕ್ಕಳಲ್ಲಿ ಕೊನೆಯವರಾದ ಗಣಪತಿ ಪೂಜಾರಿ ಅವರು ಹುಟ್ಟೂ ಅಂಧರು. ಅವರ ಪತ್ನಿ ಸುಶೀಲಾ ಪೂಜಾರಿ ಕೂಡಾ ಒಂದು ಕಣ್ಣು ದೃಷ್ಠಿ ಕೊಂಡಿದ್ದಾರೆ. ಆದರೇನಂತೆ ಬದುಕಿನಲ್ಲಿ ಒಂದಿಷ್ಟೂ ಧೈರ್ಯಗುಂದದೇ ಸಾಮಾನ್ಯರೂ ನಾಚಿಸುವಂತೆ ಬದುಕಿ ತೋರಿಸುತ್ತಿದ್ದಾರೆ ದಂಪತಿಗಳು.
ಆದರೆ ಈ ದಂಪತಿಗಳ ಛಲದ ಬದುಕಿಗೆ ಅಮಾಸೆಬೈಲು ಗ್ರಾ.ಪಂ ಎಳ್ಳುನೀರು ಬಿಡುತ್ತಿದೆ. ವೈಯಕ್ತಿಕ ಮರ್ಚಿಗೆ ಅಂಧರೊಂದಿಗೆ ಸೆಣಸಾಡುತ್ತಿರುವ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಣ್ಣತನ ಇಲ್ಲಿ ಬಟಾಬಯಲಾಗಿದೆ. ಅಂಧ ದಂಪತಿಗಳು ಆಶ್ರಯ ಮನೆಗೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷಗಳೇ ಕಳೆದರೂ ಅರ್ಜಿ ಕಡತಗಳಲ್ಲಷ್ಟೇ ಉಳಿದುಕೊಂಡಿದೆ. ಸುತ್ತಲಿನ ಮನೆಗೆ ವಿದ್ಯುತ್ ಇದ್ದರೂ ಇವರ ಮನೆ ಮಾತ್ರ ಕತ್ತಲು. ಕುಂದಾಪ್ರ ಡಾಟ್ ಕಾಂ ವರದಿ.
ಅಂಧರೇ ಕಟ್ಟಿಕೊಂಡ ಅರಮನೆ:
ಆ ಮನೆಯನ್ನು ನೋಡಿದರೆ ಅಚ್ಚರಿಯಾಗಬಹುದು. ಗಣಪತಿ ಪೂಜಾರಿ ದೃಷ್ಠಿಹೀನರಾದರೂ ತನ್ನ ಮನೆಯನ್ನು ಬಹುಪಾಲು ತಾವೇ ನಿರ್ಮಿಸಿಕೊಂಡಿದ್ದಾರೆ. ಕಲ್ಲು ಮಣ್ಣು ಹೊತ್ತಿದ್ದಾರೆ. ಮೇಸ್ತ್ರೀಗೆ ಸಹಾಯಕರಾಗಿದ್ದಾರೆ, ಮನೆಯ ಕಿಟಕಿ, ಶೌಚಾಲಯ, ಮೇಲ್ಛಾವಣಿ ಹೀಗೆ ಎಲ್ಲವನ್ನೂ ತನ್ನ ಸ್ವಂತ ಪರಿಶ್ರಮದಿಂದ ಮಾಡಿಕೊಂಡಿದ್ದಾರೆ. ಗಂಡನ ಕೆಲಸಕ್ಕೆ ತಕ್ಕಂತೆ ಪತ್ನಿಯ ಸಾಥ್ ಹಾಗೂ ಅಳತೆ, ಆಯಾ ನೋಡುವ ಕೆಲಸಕ್ಕೆ ಹೊರಗಿನವರು ಬಂದದ್ದು ಬಿಟ್ಟರೇ ಮನೆಯ ಬಹುಪಾಲು ಕೆಲಸವನ್ನು ತಾವೇ ಮಾಡಿಕೊಂಡಿದ್ದಾರೆ.
ಅಮಾಸೆಬೈಲು ಗ್ರಾ.ಪಂ ನೆರವು ನೀಡುತ್ತಿಲ್ಲ:
ತಮ್ಮ ವಿಕಲಚೇತನತೆಯನ್ನು ಒಪ್ಪಿ ಮದುವೆಯಾಗಿರುವ ದಂಪತಿಗಳು ಚಿಕ್ಕದೊಂದು ಮನೆ ಮಾಡಿಕೊಳ್ಳುವ ಪ್ರಸ್ತಾಪ ಮುಂದಿಟ್ಟಾಗಲೆಲ್ಲಾ ಅಮಾಸೆಬೈಲು ಗ್ರಾಮ ಪಂಚಾಯತ್ ಅದನ್ನು ತಿರಸ್ಕರಿಸುತ್ತಲೇ ಬಂದಿದೆ. ೨೦೧೩ರಲ್ಲಿ ಆಶ್ರಯ ಮನೆಗಾಗಿ ಅರ್ಜಿ ಸಲ್ಲಿಸಿ ಯೋಜನೆ ನಂಬಿ ಹಂತಹಂತ ಮನೆಕಟ್ಟುತ್ತಾ ಬಂದು ಇತ್ತಿಚಿಗೆ ಮನೆ ಗೃಹ ಪ್ರವೇಶ ಕೂಡಾ ಆಗಿದ್ದರೂ, ಈವರೆಗೂ ಆಶ್ರಯ ಮನೆ ಯೋಜನೆಯ ಹಣ ಬಿಡುಗಡೆಯಾಗಿಲ್ಲ. ಶೌಚಾಲಯಕ್ಕೆ ಅರ್ಜಿ ಹಾಕಿದ್ದರೂ ಅದನ್ನೂ ಪುರಸ್ಕರಿಸಿಲ್ಲ. ವಿಕಲಚೇತನರಿಗೆ ಅಮಾಸೆಬೈಲು ಗ್ರಾಪಂ ಶೇ.೩ರಲ್ಲಿ ಅನುದಾನದಲ್ಲಿ ನೀಡಬೇಕಿದ್ದ ಹಣ ಕೂಡಾ ನೀಡುತ್ತಿಲ್ಲ. ಆಶ್ರಯ ಮನೆ ಯೋಜನೆಯಿಂದ ಹಣ ಬರುವುದೆಂದು ನಂಬಿ ಗಣಪತಿ ಅವರು ಮಾಡಿಕೊಂಡ ಕೈಸಾಲ ಮಾತ್ರ ದೊಡ್ಡದಾಗಿದೆ. ಅದನ್ನು ಹಿಂತಿರುಗಿಸುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಕುಂದಾಪ್ರ ಡಾಟ್ ಕಾಂ.
ಆಶ್ರಯ ಮನೆ ಕಟ್ಟಿಕೊಳ್ಳಲು ಅಗತ್ಯ ದಾಖಲೆ ನೀಡಿದ್ದಾರೆ. ಮೂರು ವರ್ಷ ಸತಾಯಿಸಿದ ಬಳಿಕ ಯೋಜನೆಗೆ ಸೇರಿಸಿಕೊಂಡಿದ್ದಾರಾದರೂ ಈವರೆಗೂ ಒಂದು ರೂಪಾಯಿ ಹಣವನ್ನೂ ಬಿಡುಗಡೆ ಮಾಡಿಲ್ಲ. ಆಶ್ರಯ ಮನೆ ಹೆಸರಿನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಹಣ ನೀಡಿರುವ ಪಂಚಾಯತ್, ಅಂಧ ದಂಪತಿಗಳನ್ನು ಮಾತ್ರ ಕಛೇರಿಗೆ ಅಲೆದಾಡಿಸುತ್ತಿದೆ.
ಬದುಕು ದುಸ್ತರ:
ಗಣಪತಿ ಪೂಜಾರಿ ಹಾಗೂ ಸುಶೀಲಾ ದಂಪತಿಗಳಿಗೆ ವಿಕಲಚೇತನ ಮಾಶಾಸನ ದೊರೆಯುದೊಂದು ಬಿಟ್ಟರೆ ಬೇರಾವುದೇ ಆರ್ಥಿಕ ಮೂಲವಿಲ್ಲ. ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಹೀಗಿದ್ದರೂ ಸ್ಥಳೀಯ ಸರಕಾರವಾಗಲಿ, ವಿಕಲಚೇತನರ ಕಲ್ಯಾಣ ಇಲಾಖೆಯಾಗಲಿ, ಜನಪ್ರತಿನಿಧಿಗಳಾಗಲಿ ಅಂಧ ದಂಪತಿಗಳ ಪರ ನಿಲ್ಲದೇ ನುಣುಚಿಕೊಳ್ಳುತ್ತಿದ್ದಾರೆ. ಸ್ವಂತ ಪರಿಶ್ರಮದಿಂದ ಬದುಕುತ್ತಿರುವ ದಂಪತಿಗಳಿಗೆ ನೈತಿಕ ಸ್ಥೈರ್ಯ ತುಂಬಬೇಕಿರುವ ಸರಕಾರ ಅಂಧರನ್ನೂ ಸತಾಯಿಸುವ ಮಟ್ಟಕ್ಕಿಳಿದಿರುವುದು ವ್ಯವಸ್ಥೆಯ ದೌರ್ಭಾಗ್ಯವೇ ಸರಿ.