ಸಹಸ್ರ ಹೊಂಡಾಭಿಷೇಕಕ್ಕೆ ರೆಡಿಯಾಗಿದೆ ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ!

Call us

Call us

Call us

ಗಂಗೊಳ್ಳಿ: ಇಲ್ಲಿರುವ ಚಿತ್ರವನ್ನೊಮ್ಮೆ ನೋಡಿ. ಇದೇನು ಯಾವುದೋ ಮದಗದ ಚಿತ್ರವಲ್ಲ. ಇದು ರಸ್ತೆ ಹೊಳೆಯಾದ ಕತೆ ಹೇಳುವ ಚಿತ್ರ. ಹೌದು ಮಳೆಗಾಲಕ್ಕೆ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಮ್ಯಾ0ಗನೀಸ್ ರಸ್ತೆ ಹೊಳೆಯ ರೂಪ ತಳೆದು ನಿಂತಿದೆ. ಇಡೀ ಮ್ಯಾಂಗನೀಸ್ ರಸ್ತೆಯೆಂಬೋ ರಸ್ತೆ ಒಂದೇ ಮಳೆಗೆ ತನ್ನ ಸಹಸ್ರಾರು ಹೊಂಡಗಳಲ್ಲಿ ಕೊಳಕು ನೀರನ್ನು ತುಂಬಿಕೊಂಡು ಕೆಸರುಗದ್ದೆಯದಂತಾಗಿ ಬಿಟ್ಟಿದೆ. ಇನ್ನು ಮಳೆಗಾಲ ನೆಟ್ಟಗೆ ಆರಂಭಗೊ0ಡಿಲ್ಲ. ಅಷ್ಟರಲ್ಲಾಗಲೇ ಈ ರಸ್ತೆ ಎಂದಿನಂತೆ ಈ ಬಾರಿಯೂ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿದೆ.

Call us

Click Here

ದೇವಸ್ಥಾನಗಳಲ್ಲಿ ದೇವರಿಗೆ ಸಹಸ್ರ ಕುಂಭಾಭಿಷೇಕ ನಡೆಯುವದರ ಬಗೆಗೆ ನೀವು ಕೇಳಿರುತ್ತೀರಿ. ಅಲ್ಲೇನು ಮಾಡುತ್ತಾರೋ ಗೊತ್ತಿಲ್ಲ. ಆದರೆ ಈ ರಸ್ತೆಯಲ್ಲಿ ಬರುವವರಿಗೆ ಮಾತ್ರ ಸಹಸ್ರ ಹೊಂಡಾಭಿಷೇಕದ ಅನುಭವ ಶತಸ್ಸಿದ್ಧ. ಬೇಸಿಗೆ ಕಾಲವಿಡೀ ಧೂಳುಮಯವಾಗಿದ್ದ ಈ ರಸ್ತೆ ಇದೀಗ ಜಲಮಯವಾಗಿಬಿಟ್ಟಿದೆ. ರಸ್ತೆಯ ಎರಡೂ ಕೊನೆಗಳಲ್ಲಿ ದೊಡ್ಡ ದೊಡ್ಡ ನೀರಿನ ಕೆರೆಗಳು ಈ ಬಾರಿಯೂ ಎಂದಿನಂತೆ ನಿರ್ಮಾಣಗೊಂಡಿದೆ. ಕಾಲು ಇಟ್ಟ ಕಡೆಯೆಲ್ಲಾ ಹೊಂಡ ಗುಂಡಿಗಳೇ ಕಾಣಿಸುವ ಈ ರಸ್ತೆಯಲ್ಲಿ ವಾಹನಗಳು ಗಂಟೆಗೊಂದು ಕಿ.ಮೀ ಲೆಕ್ಕದಲ್ಲಿ ಚಲಿಸಬೇಕಾದ ದುಸ್ಥಿತಿಯಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ಈ ರಸ್ತೆಯ ತುಂಬೆಲ್ಲಾ ಕಸಕಡ್ಡಿ ತ್ಯಾಜ್ಯಗಳು ತುಂಬಿಕೊಂಡು ಇಲ್ಲಿನ ಸಂಚಾರವನ್ನು ಅಸಹನೀಯವಾಗಿಸಿದೆ. ದಿನವಿಡೀ ಸಹಸ್ರಾರು ಜನರು ಒಡಾಡುವ ಅದರಲ್ಲೂ ಮೀನುಗಾರರ ಪಾಲಿನ ಜೀವ ನಾಡಿಯಂತಿರುವ ಈ ರಸ್ತೆಯಲ್ಲಿ ಈ ಮಳೆಗಾಲ ಕಳೆದರೆ ಡಾಂಬರನ್ನು ಭೂತಗನ್ನಡಿಯಿಟ್ಟು ಹುಡುಕಬೇಕಾಗಿ ಬರಬಹುದು.

ಸುಂದರವಾದ ಪಂಚಗಂಗಾವಳಿ ನದಿ ಮತ್ತು ಮೀನುಗಾರಿಕಾ ಬಂದರನ್ನು ವೀಕ್ಷಿಸಲು ಸಂಪರ್ಕ ಕೊಂಡಿಯಾಗಿರುವ ಗಂಗೊಳ್ಳಿಯ ಇಂತಹ ಪ್ರಮುಖ ರಸ್ತೆಯನ್ನು ಕನಿಷ್ಠ ರಿಪೇರಿ ಕೂಡ ಮಾಡಿಸದೆ ಯಾವ ಕಾಲವಾಗಿದೆಯೋ? ಯಾವೊಬ್ಬ ಜನಪ್ರತಿನಿಧಿಗಳು ಇಲ್ಲಿನವರೆಗೆ ಇದರ ಬಗೆಗೆ ತಲೆಕೆಡಿಸಿಕೊಳ್ಳದಿರುವುದು ಇಲ್ಲಿನ ನಿವಾಸಿಗಳ ದೌರ್ಭಾಗ್ಯ. ಹಿಂದೊಮ್ಮೆ ರಸ್ತೆ ಕಾಮಗಾರಿ ಆರಂಭಿಸುವ ನಾಟಕ ಕೂಡ ಆಡಿದ್ದಾಯಿತು. ಆ ಬಳಿಕ ಜನರನ್ನು ಮರುಳುಗೊಳಿಸಲು ತರಹೇವಾರಿ ಕತೆಗಳನ್ನು ಹೆಣೆಯಲಾಯಿತು. ಆದರೆ ಕೆಲಸ ಆರಂಭವಾಗಲೂ ಇಲ್ಲ ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿಲ್ಲ. ಗೂಬೆ ಒಬ್ಬರ ಹೆಗಲಿನಿಂದ ಇನ್ನೊಬ್ಬರ ಹೆಗಲಿಗೆ ಹಾರುತ್ತಾ ಸಾಗುತ್ತಿದೆ. ಈ ರಸ್ತೆಯಲ್ಲಿನ ಸದ್ಯದ ಸ್ಥಿತಿ ಅನಾರೋಗ್ಯಕರ ವಾತಾವರಣವನ್ನು ಸೃಷ್ಟಿಮಾಡಿದೆ. ಮ್ಯಾಂಗನೀಸ್ ನಿವಾಸಿಗಳ ಗೋಳು ವರುಷವಿಡೀ ಕೇಳುವವರಿಲ್ಲದೆ ಮುಗಿಲು ಮುಟ್ಟುತ್ತಿದೆ. ಸ0ಬಂಧಪಟ್ಟವರಾರೂ ಈ ಕಡೆ ತಲೆ ಹಾಕಿ ಮಲಗುತ್ತಿಲ್ಲ. ಒಂದಂತೂ ಸತ್ಯ ಈ ಬಾರೀ ಜೋರು ಮಳೆ ಬಂದದ್ದೇ ಹೌದಾದಲ್ಲಿ ಇಲ್ಲಿನ ಮೀನುಗಾರರು ಹೊಳೆಯಲ್ಲಿರುವ ತಮ್ಮ ದೋಣಿಗಳನ್ನು ರಸ್ತೆಗೆ ತರಬೇಕಾದ ಸಂದರ್ಭ ಬಂದಿತು.
ವರದಿ: ನರೇಂದ್ರ ಎಸ್ ಗಂಗೊಳ್ಳಿ.

Leave a Reply