ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿದ್ದ ಸಾಸ್ತಾನ ಕೋಡಿ ಕನ್ಯಾಣದ ನಿವಾಸಿ ಸಂತೋಷ ಕುಂದರ್ (29) ಶವವನ್ನು ದೂರು ನೀಡಿದ್ದ ಯುವತಿ ಮನೆ ಮುಂದಿರಿಸಿ ಪ್ರತಿಭಟಿಸಿದ ಘಟನೆ ರವಿವಾರ ನಡೆದಿದೆ. ಯುವತಿ ನೀಡಿದ ದೂರಿನಲ್ಲಿ ಯಾವುದೇ ಸತ್ಯಾಂಶವಿರಲಿಲ್ಲ. ಹೀಗಾಗಿ ಆತ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಿ ಸ್ಥಳೀಯರು ಯುವತಿ ಮನೆ ಎದುರು ಪ್ರತಿಭಟನೆ ನಡೆಸಿದರು. ಮೇ 2ರಿಂದ ನಾಪತ್ತೆಯಾಗಿದ್ದ ಸಂತೋಷ್ ವಿರುದ್ಧ ಸ್ಥಳೀಯ ಯುವತಿಯೋರ್ವಳು ಮೇ 2ರಂದು ಕೋಟ ಪೊಲೀಸ್ ಠಾಣೆಗೆ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದು, ಅಂದಿನಿಂದ ಆತ ಕಾಣೆಯಾಗಿದ್ದ. ಶನಿವಾರ ಆತ ಕಡೂರು ಬೀರೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.
ಸಂತೋಷ ಕುಂದರ್ ಉತ್ತಮ ನಡತೆಯ ಯುವಕನಾಗಿದ್ದ. ಯುವತಿ ಆತನ ವಿರುದ್ಧ ದುರುದ್ದೇಶದಿಂದ ಈ ದೂರು ದಾಖಲಿಸಿದ್ದಾಳೆ. ತಪ್ಪು ಮಾಡದೆ ಶಿಕ್ಷೆ ಅನುಭವಿಸಬೇಕಾಯಿತು ಎನ್ನುವ ಬೇಸರದಲ್ಲಿ ಆತ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಮನೆ ಮುಂದೆ ಪ್ರತಿಭಟನೆ ನಡೆಯುವ ಹಿನ್ನೆಲೆಯಲ್ಲಿ ಅಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಸ್ವಲ್ಪ ಹೊತ್ತು ಮನೆ ಮುಂದೆ ಪ್ರತಿಭಟಿಸಿದ ಬಳಿಕ ನೂರಾರು ಮಂದಿ ಸಾರ್ವಜನಿಕರ ಉಪಸ್ಥಿತಿಯಲ್ಲಿ ಹುಡುಗನ ಮನೆ ಸಮೀಪ ಅಂತ್ಯಕ್ರಿಯೆ ನೆರವೇರಿತು.
ಯುವತಿಗೆ ಸುಳ್ಳು ದೂರು ದಾಖಲಿಸಲು ಹ್ಯೂಮನ್ ರೈಟ್ಸ್ ಸಂಸ್ಥೆಯೊಂದು ಸಹಕಾರ ನೀಡಿದೆ. ಇನ್ನು ಮುಂದೆ ಯಾವುದೇ ಸಂಘಟನೆ ಬಳಿಗೆ ಈ ರೀತಿಯ ಪ್ರಕರಣಗಳು ಬಂದಾಗ ಪೂರ್ವಾಪರಗಳನ್ನು ತಿಳಿದು, ಸ್ಥಳೀಯರನ್ನು ವಿಚಾರಿಸಿ ಮುಂದುವರಿಯಬೇಕು. ಇಲ್ಲವಾದರೆ ಮುಗ್ಧರಿಗೆ ಸಂತೋಷ್ ರೀತಿಯ ಪರಿಸ್ಥಿತಿ ಎದುರಾಗಬಹುದು ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಯುವಕ ಶನಿವಾರ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಕೂಡಲೇ ಯುವತಿ ಮನೆಯವರು ಮನೆಗೆ ಬೀಗ ಹಾಕಿ ಬೇರೆಡೆ ಹೋಗಿದ್ದರು. ಆದ್ದರಿಂದ ಪ್ರತಿಭಟನೆ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ.