ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಬೈಂದೂರು ತಾಲೂಕಿನ ತಗ್ಗರ್ಸೆ ಎಂಬಲ್ಲಿ ನಡೆದಿದೆ. ತಗ್ಗರ್ಸೆ ನಿವಾಸಿ ದಾಸಪ್ಪ (42) ಮೃತ ದುರ್ದೈವಿ.
ಕೊಲ್ಲೂರು ಕಡೆಯಿಂದ ಬರುತ್ತಿದ್ದ ಬೆಂಗಳೂರು ನೊಂದಣಿಯ ಸ್ವಿಫ್ಟ್ ಕಾರು ತಗ್ಗರ್ಸೆಯಲ್ಲಿ ರಸ್ತೆಯ ಬದಿಯಲ್ಲಿ ನಿಂತಿದ್ದ ದಾಸಪ್ಪ ಎಂಬುವವರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ತಲೆಯ ಭಾಗಕ್ಕೆ ಗಂಭೀರ ಗಾಯವಾದ ಅವರನ್ನು ಸ್ಥಳಯರು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲೇ ಮೃತಪಟ್ಟಿದ್ದರು.
ಡಿಕ್ಕಿ ಹೊಡೆದ ಕಾರಿನ ಚಾಲಕ ಎಲ್ಲಿಯೂ ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದು ಶಿರೂರು ತೂದಳ್ಳಿ ಮೂಲಕ ಭಟ್ಕಳ ಕಡೆಗೆ ತೆರಳಿದ್ದ ಎನ್ನಲಾಗಿದೆ. ಘಟನೆಯ ಮಾಹಿತಿ ಪಡೆದುಕೊಂಡ ಬೈಂದೂರು ಪೊಲೀಸರು ತಕ್ಷಣ ಕಾರನ್ನು ಹಿಂಬಾಲಿಸಿ ಹೋಗಿದ್ದು ಅಷ್ಟರಲ್ಲೇ ಕಾರನ್ನು ಭಟ್ಕಳದ ಬೇಲಂದೂರು ಎಂಬಲ್ಲಿ ನಿಲ್ಲಿಸಿ, ಚಾಲಕ ಪರಾರಿಯಾಗಿದ್ದ. ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿಎಸ್ಐ ಸಂಗೀತಾ ಅವರ ತಂಡ ಕಾರ್ಯಾಚರಣೆಯಲ್ಲಿದ್ದು ತಕ್ಷಣ ಕಾರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದ ಗೂಡ್ಸ್ ಕ್ಯಾರಿಯರ್ ರಿಕ್ಷಾ ಚಾಲಕರಾಗಿದ್ದ ದಾಸಪ್ಪ ಅವರ ನಿಧನದಿಂದ ತಗ್ಗರ್ಸೆ ಭಾಗದಲ್ಲಿ ನೀರವ ಮೌನ ಆವರಿಸಿತ್ತು. ಮೃತರು ತಾಯಿ, ಮಡದಿ, ಓರ್ವ ಪುತ್ರಿ, ಸಹೋದರ-ಸಹೋದರಿಯರು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.
ಸರಕಾರಿ ಆಸ್ಪತ್ರೆ ಬಗ್ಗೆ ಸಾರ್ವಜನಿಕರ ಆಕ್ರೋಶ:
ಅಪಘಾತಕ್ಕೊಳದಾಗ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಆ ಸಮಯದಲ್ಲಿ ಡ್ಯೂಟಿ ಡಾಕ್ಟರ್ ಆಸ್ಪತ್ರೆಯಲ್ಲಿರದೇ ಇದ್ದುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಅಪಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದು 45 ನಿಮಿಷಗಳ ಬಳಿಕ ಡಾಕ್ಟರ್ ಆಸ್ಪತ್ರೆಗೆ ಬಂದಿರುವುದು ಹಾಗೂ ಆಸ್ಪತ್ರೆಯ ಶುಶ್ರೂಕರು ಸರಿಯಾಗಿ ಸ್ಪಂದಿಸದಿರುವುದು ಆಕ್ರೋಶಕ್ಕೆ ಕಾರಣವಾಯಿತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು ತಡವಾಗಿ ಬಂದ ವೈದ್ಯರು ಸ್ಪಷ್ಟನೆ ನೀಡಬೇಕೆಂದು ಪಟ್ಟುಹಿಡಿದರು. ಹಲವು ಪ್ರಕರಣಗಳಲ್ಲಿ ಇಂತಹದೇ ಸನ್ನಿವೇಶ ಎದುರಾಗಿದ್ದು, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯರು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೂ ವೈದ್ಯರ ಕೊರತೆ ಇದೆ. ಇರುವ ವೈದ್ಯರೇ ಹೊಂದಾಣಿಕೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ತಮ್ಮ ಅಳಲು ತೊಡಿಕೊಂಡರು