ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಸೆ.17: ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ದೋಣಿಗೆ ತೆರೆ ಬಡಿದು ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ನಾಪತ್ತೆಯಾಗಿರುವ ಘಟನೆ ಶುಕ್ರವಾರ ರಾತ್ರಿ 8 ಗಂಟೆಗೆ ವೇಳೆಗೆ ನಡೆದಿದೆ. ಬೈಂದೂರು ತಾಲೂಕಿನ ತಾರಾಪತಿಯಲ್ಲಿ ಘಟನೆ ನಡೆದಿದ್ದು, ನಾಪತ್ತೆಯಾದ ಮೀನುಗಾರರು ಚರಣ ಖಾರ್ವಿ ಹಾಗೂ ಅಣ್ಣಪ್ಪ ಮೊಗವೀರ ಎಂದು ಹೇಳಲಾಗಿದೆ.
ಮಧ್ಯಾಹ್ನದ ಬಳಿಕ ಅಳುವೆಕೋಡಿಯಿಂದ ಮೀನುಗಾರಿಕೆಗೆ ಜೈಗುರೂಜಿ ಹೆಸರಿನ ನಾಡದೋಣಿಯಲ್ಲಿ 8 ಮಂದಿ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತಾರಾಪತಿ ಸಮೀಪಿಸುತ್ತಿದ್ದಂತೆ ಸಮುದ್ರದ ಅಲೆಯ ಹೊಡೆತಕ್ಕೆ ದೋಣಿ ಮುಗುಚಿದ್ದು, ಬಲೆಯ ಅಡಿಗೆ ಸಿಲುಕಿದ್ದ ಇಬ್ಬರು ನಾಪತ್ತೆಯಾಗಿದ್ದರು. ಉಳಿದ ಆರು ಮಂದಿ ಪಕ್ಕದ ದೋಣಿಯವರು ರಕ್ಷಿಸಿ ದಡಕ್ಕೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ./
ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಬೈಂದೂರು ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿಗಳು ಹಾಗೂ ಮೀನುಗಾರರು ಶೋಧಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಗಂಗೊಳ್ಳಿಯಲ್ಲಿ ಓರ್ವ ಮೀನುಗಾರ ನಾಪತ್ತೆ:
ಹೊಳೆಯಲ್ಲಿ ಕಿರು ದೋಣಿಯ ಮೂಲಕ ಮೀನು ಹಿಡಿಯಲೆಂದು ಹೋಗಿದ್ದ ಗಂಗೊಳ್ಳಿ ಮಲ್ಯರಬೆಟ್ಟು ನಿವಾಸಿ ದೇವೇಂದ್ರ ಖಾರ್ವಿ (35) ಎಂಬ ವ್ಯಕ್ತಿ ಸೆ.16ರ ಸಂಜೆಯಿಂದ ನಾಪತ್ತೆಯಾಗಿದ್ದು, ಆತನಿಗಾಗಿ ಗಂಗೊಳ್ಳಿ ಬಂದರು ಸಮೀಪ ಶುಕ್ರವಾರ ಸಂಜೆಯ ತನಕ ಮೀನುಗಾರನ ಶೋಧ ಕಾರ್ಯ ನಡೆಸಿದ್ದು, ನಾಪತ್ತೆಯಾದ ವ್ಯಕ್ತಿ ಪತ್ತೆಯಾಗಿಲ್ಲ.
ಗುರುವಾರ ಸಂಜೆ 6.30 ಕ್ಕೆ ಮನೆಯಿಂದ ಮೀನುಗಾರಿಕೆಗೆ ತೆರಳಿದ ದೇವೇಂದ್ರ ಅವರು ರಾತ್ರಿ 9 ಗಂಟೆಯಾದರೂ ವಾಪಾಸ್ ಮರಳಿ ಬಂದಿರಲಿಲ್ಲ. ಮನೆಯವರುಹುಡುಕಾಟ ನಡೆಸಿದ್ದು ಬಂದರು ಬಳಿ ಹೊಳೆಯಲ್ಲಿ ದೋಣಿ ಸಿಕ್ಕಿದೆ. ಮೀನುಗಾರಿಕೆ ನಡೆಸುವಾಗ ಆಯತಪ್ಪಿ ನೀರಿಗೆ ಬಿದ್ದಿರುವ ಶಂಕೆಯಿಂದ ರಾತ್ರಿಯಿಂದ ಶುಕ್ರವಾರ ಸಂಜೆ ತನಕವೂ ಹುಡುಕಾಡ ನಡೆಸಲಾಯಿತು. ಮುಳುಗು ತಜ್ಞರು, ಅಗ್ನಿಶಾಮಕ ದಳದವರು ಕೂಡ ಶೋಧ ಕಾರ್ಯ ನಡೆಸಿದ್ದರು/ ಕುಂದಾಪ್ರ ಡಾಟ್ ಕಾಂ ಸುದ್ದಿ/