ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು.ಜು.2: ರಾಜ್ಯ ಸರಕಾರ ನೀಡಿರುವ ಆಶ್ವಾಸನೆಯಂತೆ ಗ್ಯಾರಂಟಿ ಯೋಜನೆ ಜಾರಿಗೆ ಸಂಬಂಧಿಸಿ ಸಚಿವ ಸಂಪುಟ ಸಭೆ ಇಂದು ನಡೆದಿದ್ದು, ಸಂಪುಟ ತೀರ್ಮಾನಗಳ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವೇಳೆ ಮಾತನಾಡಿ, ಜನ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ನಾವು ಬಸವಣ್ಣನ ನಾಡಿನವರು. ಕೊಟ್ಟ ಮಾತಿಗೆ ಬದ್ಧ. 5 ಗ್ಯಾರಂಟಿಗಳನ್ನು ನೀಡುವ ಸಂಬಂಧ ತೀರ್ಮಾನ ಮಾಡಿದ್ದೇವೆ ಎಂದರು.
ಗೃಹಜ್ಯೋತಿ:
200 ಯೂನಿಟ್ ಉಚಿತ ವಿದ್ಯುತ್. ಈ ಯೋಜನೆಯ ದುರ್ಬಳಕೆ ತಡೆಯಲು ಫಲಾನುಭವಿಗಳು ಹಿಂದಿನ ಒಂದು ವರ್ಷದ ಅವಧಿಯಲ್ಲಿ ಬಳಕೆ ಮಾಡಿರುವ ವಿದ್ಯುತ್ ಸರಾಸರಿಯನ್ನು ಗಣನೆಗೆ ತೆಗೆದುಕೊಂಡು, ಅದರ ಜೊತೆಗೆ 10% ವಿದ್ಯುತನ್ನು ಹೆಚ್ಚುವರಿಯಾಗಿ ಉಚಿತವಾಗಿ ನೀಡಲಾಗುವುದು. ಜುಲೈ 1ರ ವರೆಗೆ ಬಳಕೆ ಮಾಡಿರುವ ವಿದ್ಯುತ್ ಬಿಲ್ ಅನ್ನು ಬಳಕೆದಾರರು ಕಟ್ಟಬೇಕಿದ್ದು, ಆಗಸ್ಟ್ ನಿಂದ ಎಲ್ಲರೂ ಯೋಜನೆಯ ಲಾಭ ಪಡೆಯಬಹುದಾಗಿದೆ. ಬಾಡಿಗೆದಾರರಿಗೂ ಅನ್ವಯವಾಗಲಿದೆ.
ಶಕ್ತಿ:
ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂನ್ 11 ರಿಂದ ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣ ಅವಕಾಶ. ಬಿಎಂಟಿಸಿ ಬಸ್ ಸೇವೆಯನ್ನು ಬಳಸಬಹುದು. ಜೂನ್ 11 ರಂದು “ಶಕ್ತಿ” ಯೋಜನೆಗೆ ಚಾಲನೆ ನೀಡಲಿದ್ದು, ಶೇ. 94 ರಷ್ಟು ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆಯಲಿದ್ದಾರೆ. ಎಸಿ ಮತ್ತು ಲಕ್ಸುರಿ ಬಸ್ ಹೊರತುಪಡಿಸಿ ಸಾಮಾನ್ಯ ಬಸ್ ಗಳಿಗೆ ಮಾತ್ರ ಅನ್ವಯ. ಕೆಎಸ್ಆರ್ಟಿಸಿಸಿಯಲ್ಲಿ 50 % ಸೀಟು ಪುರುಷರಿಗೆ ಮೀಸಲು. ಐರಾವತ, ರಾಜಹಂಸ ಸೇರಿ ಎಲ್ಲ ರೀತಿಯ ಲಕ್ಸ್ಯೂರಿ ಬಸ್, ಎಸಿ ಮತ್ತು ನಾನ್ ಎಸಿ ಸ್ಲೀಪರ್ ಬಸ್ ಗಳಿಗೆ ಇದು ಅನ್ವಯ ಆಗದು.
ಅನ್ನಭಾಗ್ಯ:
ಜುಲೈ 1 ರಿಂದ ಬಡತನ ರೇಖೆಗಿಂತ ಕೆಳಗಿನ ಹಾಗೂ ಅಂತ್ಯೋದಯ ಕಾರ್ಡ್ಗಳನ್ನು ಹೊಂದಿರುವ ರಾಜ್ಯದ ಎಲ್ಲಾ ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ ತಲಾ 10 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ಸರಕಾರ ನಿರ್ಧರಿಸಿದೆ. ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ಹಿಂದಿನ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಡಿ ಸದ್ಯ 5 ಕೆ.ಜಿ ಆಹಾರಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಅದನ್ನು 10 ಕೆ.ಜಿ ಗೆ ಏರಿಸಲಾಗಿದೆ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ.
ಗೃಹಲಕ್ಷ್ಮಿ:
ಬಿಪಿಎಲ್ ಅಥವಾ ಎಪಿಎಲ್ ಕುಟುಂಬದ ಮಹಿಳೆಯು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಆಧಾರ್ ಕಾರ್ಡ್ನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ, ತನ್ನನ್ನು ಮನೆಯ ಯಜಮಾನಿ ಎಂದು ಘೋಷಿಸಿಕೊಳ್ಳಬೇಕು. ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಆಧಾರ್ ಕಾರ್ಡ್, ಅಕೌಂಟ್ ಡೀಟೇಲ್ಸ್, ಆನ್ಲೈನ್ ಆಫ್ ಲೈನ್ ಅರ್ಜಿ ಆಧರಿಸಿ ಆಗಸ್ಟ್ 15 ರಿಂದ ಜಾರಿ. ಸಾಮಾಜಿಕ ಭದ್ರತೆ ಪಿಂಚಣಿದಾರರಿಗೂ 2000 ರೂ. ನೀಡಲಾಗುತ್ತಿದೆ.
ಯುವನಿಧಿ:
ಪದವಿ ಪಡೆದು 180 ದಿನಗಳು ಕಳೆದರೂ ಉದ್ಯೋಗ ಸಿಗದೆ ಭವಿಷ್ಯದ ಬಗ್ಗೆ ಆತಂಕದಲ್ಲಿರುವ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಮೂಲಕ ಉದ್ಯೋಗ ಹುಡುಕಾಟಕ್ಕೆ ಅನುಕೂಲ ಕಲ್ಪಿಸುವುದು ಮತ್ತು ಆರ್ಥಿಕ ಸಂಕಷ್ಟದಿಂದ ಅವರನ್ನು ಪಾರುಮಾಡುವುದು ಈ ಯೋಜನೆಯ ಉದ್ದೇಶ. ಲಿಂಗತ್ವ ಅಲ್ಪಸಂಖ್ಯಾತರು ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
2023 ರಲ್ಲಿ ಪದವಿ ಪಾಸ್ ಮಾಡಿದವರಿಗೆ 24 ತಿಂಗಳು ಪ್ರತಿ ತಿಂಗಳು 3000, ಡಿಪ್ಲೋಮದಾರರಿಗೆ 1500 ರು ಭತ್ಯೆ. ತೃತೀಯ ಲಿಂಗಿಗಳಿಗೂ ಅನ್ವಯ. 18 ವರ್ಷದಿಂದ 35 ವರ್ಷದವರಿಗೆ ಅನ್ವಯ. ಅವರು ಅರ್ಜಿ ಹಾಕಬೇಕು. ಅರ್ಜಿ ಕೊಟ್ಟಾಗಿಂದ ಜಾರಿ. ಅರ್ಜಿ ಸಲ್ಲಿಸಲು 6 ತಿಂಗಳು ಕಾಲವಕಾಶ ನೀಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಪುಟ ಸಚಿವರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.