ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ನೂತನ ಶಿಲಾಮಯ ಮಹಾಪ್ರವೇಶದ್ವಾರ ಗೋಪುರ ನಿರ್ಮಾಣ ಯೋಜನೆ ಮನವಿಪತ್ರವನ್ನು ದೇವಳದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.
ದೇವಳದ ಸೇವಾಸಮಿತಿ ಗೌರವಾಧ್ಯಕ್ಷರಾದ ಎಸ್. ರಾಜು ಪೂಜಾರಿ ಮನವಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ದೇವಸ್ಥಾನದಲ್ಲಿ ಬೈಂದೂರು ಭಾಗದ ಪ್ರಮುಖ ಶ್ರದ್ಧಾಕೇಂದ್ರವಾಗಿ ಮಾರ್ಪಾಡಾಗಿದ್ದು, ನಿತ್ಯ ಸೇವೆ ವಾರ್ಷಿಕ ಜಾತ್ರೆಯ ಜೊತೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯುತ್ತಿದೆ. ಮುಂದುವರಿದ ಭಾಗವಾಗಿ ಮಹಾಪ್ರವೇಶದ್ವಾರ ಗೋಪುರ ನಿರ್ಮಾಣವಾಗುತ್ತಿದ್ದು, ರೂ. 60 ಲಕ್ಷ ವೆಚ್ಚವಾಗುವ ಅಂದಾಜಿದೆ. ದೇವಳದ ಎಲ್ಲಾ ಅಭಿವೃದ್ಧಿ ಕಾರ್ಯದಲ್ಲಿ ಕೈಜೊಡಿಸಿರುವ ಭಕ್ತರು ಪ್ರವೇಶದ್ವಾರ ನಿರ್ಮಾಣದಲ್ಲಿಯೂ ಭಾಗಿಯಾಗುವಂತೆ ಕೋರಿದರು.



ಪ್ರಧಾನ ಅರ್ಚಕರಾದ ಬಿ. ಕೃಷ್ಣಮೂರ್ತಿ ನಾವಡ ಅವರು ಮಾತನಾಡಿ ಶಕ್ತಿದೇವತೆ ಮಹಾಸತಿ ಅಮ್ಮನವರ ದೇವಸ್ಥಾನದ ಶಿಲಾಮಯ ಗರ್ಭಗುಡಿಯನ್ನು 2010ರಲ್ಲಿ ನಿರ್ಮಾಣ ಮಾಡಲಾಗಿತ್ತು. ಪ್ರವೇಶದ್ವಾರವನ್ನ ಮಾತ್ರವೇ ಅಂದು ನಿರ್ಮಿಸಿದ್ದರಿಂದ ನೂತನ ಶಿಲಾಮಯ ಮಹಾಪ್ರವೇಶದ್ವಾರ ಗೋಪುರವನ್ನು ನಿರ್ಮಿಸಲು ಸಮಿತಿ ನಿರ್ಧರಿಸಿದ್ದು, ಭಕ್ತರ ಸಹಕಾರ ಅಗತ್ಯವಾಗಿ ಬೇಕಿದೆ ಎಂದರು.
ಇದನ್ನೂ ಓದಿ: ► ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ – https://kundapraa.com/?p=69505 .
ಈ ಸಂದರ್ಭದಲ್ಲಿ ದೇವಸ್ಥಾನದ ಸೇವಾಸಮಿತಿ ಅಧ್ಯಕ್ಷರಾದ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರಾದ ಶಂಕರ ಮೊಗವೀರ, ನಾಗರಾಜ ಗಾಣಿಗ, ಮಂಜುನಾಥ ಆಚಾರ್ಯ, ಸತ್ಯಪ್ರಸನ್ನ, ಪಾತ್ರಿಗಳಾದ ಅಣ್ಣಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.














